ಬೆಳ್ತಂಗಡಿ : ಬೆಳ್ತಂಗಡಿ: ಯಾವುದೇ ಪ್ರಚಾರದ ಹಂಗಿಲ್ಲದೆ, ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಳ್ತಂಗಡಿಯ ರಾಜಕೇಸರಿ ಸೇವಾ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರು 2026ನೇ ಸಾಲಿನ ಕರ್ನಾಟಕ ಮೀಡಿಯಾ ಕ್ಲಬ್ನ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿಯಾದ ‘ಕರುನಾಡ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೃತ್ತಿಯಲ್ಲಿ ಚಾಲಕರಾಗಿ ದುಡಿಯುತ್ತಾ, ಜೀವನೋಪಾಯಕ್ಕಾಗಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿರುವ ದೀಪಕ್ ಅವರು ತಮ್ಮ ದುಡಿಮೆಯ ಶೇಕಡ 10ರಷ್ಟು ಹಣವನ್ನು ಸಮಾಜ ಸೇವೆಗಾಗಿಯೇ ಮೀಸಲಿಟ್ಟಿದ್ದಾರೆ. ಕೂಲಿ ಕಾರ್ಮಿಕರನ್ನು ಜೊತೆಗೂಡಿಸಿಕೊಂಡು ‘ರಾಜಕೇಸರಿ ಸೇವಾ ಟ್ರಸ್ಟ್’ ಕಟ್ಟಿ ಬೆಳೆಸಿರುವ ಇವರು, ದಾನಿಗಳ ಸಹಕಾರದೊಂದಿಗೆ ನೂರಾರು ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ದೀಪಕ್ ಜಿ. ಅವರ ಪ್ರಮುಖ ಸಮಾಜಮುಖಿ ಕಾರ್ಯಗಳು:
ಸೂರು ಕಲ್ಪಿಸಿದ ಸಾಧಕ: ಬಡ ಕುಟುಂಬಗಳ ಕಣ್ಣೀರು ಒರೆಸಲು ಟ್ರಸ್ಟ್ ಮೂಲಕ ಇದುವರೆಗೆ 34 ಆಸರೆಯ ಮನೆಗಳನ್ನು ನಿರ್ಮಿಸಿಕೊಟ್ಟು ಬಡವರ ಬಾಳಿಗೆ ಬೆಳಕಾಗಿದ್ದಾರೆ.

ಆರೋಗ್ಯ ಮತ್ತು ರಕ್ತದಾನ: ಸ್ವತಃ 37 ಬಾರಿ ರಕ್ತದಾನ ಮಾಡಿರುವ ಇವರು, ಗ್ರಾಮ ಗ್ರಾಮಗಳಲ್ಲಿ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.
ಸ್ವಚ್ಛತೆ ಮತ್ತು ಆಶ್ರಯ: ಸರ್ಕಾರಿ ಆಸ್ಪತ್ರೆಗಳ ಆವರಣ ಸ್ವಚ್ಛತಾ ಕಾರ್ಯ, ಬಡ ರೋಗಿಗಳಿಗೆ ಆಶ್ರಯ ಹಾಗೂ ಅಂಗವಿಕಲರಿಗೆ ವೀಲ್ ಚೇರ್ಗಳನ್ನು ವಿತರಿಸಿದ್ದಾರೆ.
ಸ್ವಾವಲಂಬನೆ ಮತ್ತು ಶಿಕ್ಷಣಕ್ಕೆ ಒತ್ತು: ಬಡ ಕುಟುಂಬಗಳ ಆರ್ಥಿಕ ಆಧಾರಕ್ಕಾಗಿ ಹೊಲಿಗೆ ಯಂತ್ರ (ಟೈಲರ್ ಮಿಷನ್) ಹಸ್ತಾಂತರ, ಉಚಿತ ಸಾಮೂಹಿಕ ವಿವಾಹ ಹಾಗೂ ಅದೆಷ್ಟೋ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಭವಿಷ್ಯದ ರೂವಾರಿಯಾಗಿದ್ದಾರೆ.

ಈ ಹಿಂದೆ ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಅರಸಿ ಬಂದರೂ, ಪ್ರಚಾರದಿಂದ ದೂರವಿದ್ದು ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಮೀಡಿಯಾ ಕ್ಲಬ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದೇ ಬರುವ ನವೆಂಬರ್ 29ರಂದು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ನಡೆಯಲಿರುವ ಕರ್ನಾಟಕ ಮೀಡಿಯಾ ಕ್ಲಬ್ನ ಅಭಿನಂದನಾ ಸಮಾರಂಭದಲ್ಲಿ ದೀಪಕ್ ಜಿ. ಬೆಳ್ತಂಗಡಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.





