ಬೆಳ್ತಂಗಡಿ: ಕೇಂದ್ರ ಸರಕಾರದ ಪ್ರಸಾರ ಭಾರತಿ ಆಯೋಜಿಸಿರುವ ರವಿವಾಸರಿಯ ಅಖಿಲ ಭಾರತೀಯ ಸಂಗೀತ ಸಭಾ ಎಂಬ ರಾಷ್ಟ್ರ ಮಟ್ಟದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ 29-11-2026 ರಂದು ಭಾನುವಾರ ರಾತ್ರಿ 10:00 ಗಂಟೆಗೆ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಇವರ ಸ್ಯಾಕ್ಸೋಫೋನ್ ಕಾರ್ಯಕ್ರಮ ಮೂಡಿಬರಲಿದೆ.

ಈಗಾಗಲೇ ಆಕಾಶವಾಣಿಯ ರಾಷ್ಟ್ರ ಮಟ್ಟದಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುತ್ತಿರುವ ರಾಜ್ಯದ ಮೂರನೆಯ ಕಲಾವಿದನೆಂಬ ಹೆಗ್ಗಳಿಕೆಗೆ ಪ್ರಕಾಶ್ ದೇವಾಡಿಗರು ಪಾತ್ರರಾಗಿದ್ದಾರೆ.

ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾಗಿರುವ ಪ್ರಕಾಶ್ ದೇವಾಡಿಗ ಅವರು ಸುಮಾರು 25 ವರ್ಷಗಳಿಂದ ಆಕಾಶವಾಣಿ, ದೂರದರ್ಶನ ಸೇರಿದಂತೆ ಹಲವು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಅಮೆರಿಕ ಮುಂತಾದ ವಿದೇಶ ರಾಷ್ಟ್ರಗಳಲ್ಲೂ ತನ್ನ ಕಾರ್ಯಕ್ರಮ ನೀಡಿ ಈಗಾಗಲೇ ಜನಪ್ರಿಯರಾಗಿದ್ದಾರೆ.
ಇವರಿಗೆ ಪಕ್ಕವಾದ್ಯದಲ್ಲಿ ವಯಲಿನ್ ವಿದ್ವಾನ್ ದೀಪಕ್ ಮೂರ್ತಿ (ಬೆಂಗಳೂರು), ಮೃದಂಗ ವಿದ್ವಾನ್ ಕೃಷ್ಣ ಪವನ್ ಕುಮಾರ್ (ಮಂಗಳೂರು) ಮತ್ತು ಮೂರ್ಸಿಂಗ್ನಲ್ಲಿ ವಿದ್ವಾನ್ ಬಾಲಕೃಷ್ಣ ವಿ. (ಬೆಂಗಳೂರು) ಸಹಕರಿಸಲಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಆ ದಿನ ದೇಶದ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಏಕಕಾಲದಲ್ಲಿ ಬಿತ್ತರವಾಗುತ್ತಿರುವುದು ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಅವರು ಉಜಿರೆ ಜನಾರ್ದನ ದೇವಸ್ಥಾನದ ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದಕರೂ ಆಗಿದ್ದಾರೆ.





