ಉಡುಪಿ: ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ಹದಿನಾರರ ಹರೆಯದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲ್ಲೂರಿನ ಕೆರಾಡಿ ಗ್ರಾಮದ ಹಯ್ಯಂಗಾರು ನಿವಾಸಿ ಮಂಜುನಾಥ ನಾಯ್ಕ ಅವರ ಪುತ್ರ ಮನೀಷ್ ಮೃತಪಟ್ಟ ದುರ್ದೈವಿ. ಈತ ಉಡುಪಿಯ ಕೊಳಲಗಿರಿಯ ಜಿ.ಟಿ.ಟಿ.ಸಿ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.

ಇತ್ತೀಚೆಗೆ ಮನೀಷ್ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಈ ವಿಷಯ ತಿಳಿದ ತಂದೆ ಮಂಜುನಾಥ ಅವರು, ಮಗನ ಭವಿಷ್ಯದ ಹಿತದೃಷ್ಟಿಯಿಂದ “ಸರಿಯಾಗಿ ಕಾಲೇಜಿಗೆ ಹೋಗು” ಎಂದು ಬುದ್ಧಿಮಾತು ಹೇಳಿದ್ದರು.

ತಂದೆಯ ಮಾತಿನಿಂದ ಅತೀವ ಬೇಸರಗೊಂಡ ಮನೀಷ್, ಫೆಬ್ರವರಿ 16ರಂದು ರಾತ್ರಿ ಸುಮಾರು 9:30ರ ಹೊತ್ತಿಗೆ ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿಷ ಸೇವಿಸಿದ ಕೂಡಲೇ ಮನೀಷ್ನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಫೆಬ್ರವರಿ 19ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದ 14 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮನೀಷ್, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಮೃತನ ತಂದೆ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಡಿಆರ್ (UDR) ಕ್ರಮಾಂಕ 03/2026, ಕಲಂ: 194 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








