ಗುಂಡ್ಯ: ಗುಂಡ್ಯದಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಬೆಳ್ತಂಗಡಿಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಕ್ಕಡ ನಿವಾಸಿ ಚಂದ್ರಶೇಖರ್ ಗೌಡ , ಉಜಿರೆ ನಿವಾಸಿ ಶ್ರೀಧರ್ ಮರಕಡ, ಉಜಿರೆ ನಿವಾಸಿ ಜನಾರ್ದನ ಕೆರಿಮಾರ್ ಸಾವನ್ನಪ್ಪಿದ್ದಾರೆ.

ಸುರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಸಂಬಂಧಿಕರಾಗಿದ್ದಾರೆ. ಸಕಲೇಶಪುರದಲ್ಲಿ ಮದುವೆಗೆ ಹೋಗಿ ಕೊಕ್ಕಡಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಮಧ್ಯಾಹ್ನ 2.30ಕ್ಕೆ ಹೊರಟು ಬೆಂಗಳೂರು ಮೂಲಕ ತಿರುಪತಿ ಹೊರಟಿರುವ ರಾಜಹಂಸ ಬಸ್ ಹಾಗೂ ಕಾರಿನ ಮಧ್ಯೆ ಗುಂಡ್ಯದ ಗಡಿ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ರಕ್ತಸಿಕ್ತವಾಗಿದ್ದವರನ್ನು ಸ್ಥಳೀಯರ ನೆರವಿನೊಂದಿಗೆ ಹೊರತೆಗೆದಿದ್ದಾರೆ.








