Tamil Nadu assembly election results 2026: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ನಿರೀಕ್ಷೆ ಮೀರಿದ ಅಚ್ಚರಿ ಗೆಲುವು ದಾಖಲಿಸಿದೆ. 234 ವಿಧಾನಸಭಾ ಕ್ಷೇತ್ರಗಳ ಪೈಕಿ ವಿಜಯ್ ಅವರ TVK ಪಕ್ಷವು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ ಟ್ರೆಂಡ್ಗಳ ಪ್ರಕಾರ, ವಿಜಯ್ ಅವರ ಪಕ್ಷವು ಬಹುಮತಕ್ಕೆ ಬೇಕಾದ 118 ಸ್ಥಾನಗಳ ಗಡಿ ದಾಟುತ್ತಿದೆ. ಇದು ತಮಿಳುನಾಡು ರಾಜಕಾರಣದಲ್ಲಿ ಹೊಸ ಯುಗದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ. ಆಡಳಿತಾರೂಢ ಡಿಎಂಕೆ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟ ಎರಡನೇ ಸ್ಥಾನ ಪಡೆಯುತ್ತಿದೆ. ಕಾಲಿವುಡ್ನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.
ತಾವೇ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚ್ಚಿ ಈಸ್ಟ್ ಎರಡರಲ್ಲೂ ವಿಜಯ್ ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ತೀವ್ರ ಹಿನ್ನಡೆ ಅನುಭವಿಸಿದ್ದು, ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟವು ಸದ್ಯಕ್ಕೆ ಎರಡನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಡಿಎಂಕೆ ಸರ್ಕಾರದ ಸುಮಾರು 31 ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಆಡಳಿತ ವಿರೋಧಿ ಅಲೆಯ ತೀವ್ರತೆಯನ್ನು ತೋರಿಸುತ್ತಿದೆ.
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ (ಮಧ್ಯಾಹ್ನ 12ರ ಟ್ರೆಂಡ್)
ಒಟ್ಟು ಸ್ಥಾನಗಳು: 234
ಬಹುಮತಕ್ಕೆ ಬೇಕಾಗಿರುವುದು: 118
ತಮಿಳಗ ವೆಟ್ರಿ ಕಳಗಂ (ಟಿವಿಕೆ): 112
ಎಐಎಡಿಎಂಕೆ ಮೈತ್ರಿಕೂಟ: 68
ಡಿಎಂಕೆ ಮೈತ್ರಿಕೂಟ: 56
ಕಿಂಗ್ ಮೇಕರ್ ಅಲ್ಲ, ನೇರ ಕಿಂಗ್!
ಚುನಾವಣಾ ಪೂರ್ವದಲ್ಲಿ ವಿಜಯ್ ಅವರ ಪಕ್ಷವು ಕೇವಲ ‘ಕಿಂಗ್ ಮೇಕರ್’ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ, ಈಗಿನ ಟ್ರೆಂಡ್ಗಳು ವಿಜಯ್ ಅವರೇ ನೇರವಾಗಿ ಮುಖ್ಯಮಂತ್ರಿ ಪೀಠ ಅಲಂಕರಿಸುವುದನ್ನು ಖಚಿತಪಡಿಸುತ್ತಿವೆ. ವಿಜಯ್ ಅವರ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಬದಲಾವಣೆಯನ್ನು ಬಯಸಿ ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡನ್ನೂ ‘ಭ್ರಷ್ಟ ಶಕ್ತಿಗಳು’ ಎಂದು ಕರೆದಿದ್ದ ವಿಜಯ್ ಅವರ ಮಾತುಗಳು ಜನಸಾಮಾನ್ಯರಿಗೆ ತಲುಪಿದೆ. ಯಾವುದೇ ದೊಡ್ಡ ಮೈತ್ರಿಕೂಟದ ಜೊತೆ ಸೇರದೆ ಒಂಟಿಯಾಗಿ ಸ್ಪರ್ಧಿಸುವ ವಿಜಯ್ ಅವರ ನಿರ್ಧಾರಕ್ಕೆ ಮತದಾರರು ಜೈ ಎಂದಿದ್ದಾರೆ.
ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾವಣೆ
ಎಂ.ಜಿ.ಆರ್ ಮತ್ತು ಜಯಲಲಿತಾ ಅವರ ನಂತರ ಸಿನಿಮಾ ರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ. ಹಿರಿಯ ಸ್ಟಾರ್ ಹಾಗೂ ಜನಪ್ರಿಯ ನಟನೆನಿಸಿದ ಕಮಲಹಾಸನ್ ಅವರು ಕೆಲವಾರು ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರಾದರೂ ಅವರಿಗೆ ಸಿಕ್ಕ ಯಶಸ್ಸು ಸೀಮಿತ. ಕ್ಯಾಪ್ಟನ್ ವಿಜಯಕಾಂತ್ ಅವರಿಗೂ ಸಿಕ್ಕ ಯಶಸ್ಸು ಅಷ್ಟಕಷ್ಟೇ. ಸೂಪರ್ ಸ್ಟಾರ್ ರಜನೀಕಾಂತ್ ಅವರೂ ರಾಜಕೀಯಕ್ಕೆ ಅಡಿ ಇಡುವ ಆಲೋಚನೆಯಲ್ಲಿ ಇದ್ದರಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ದಳಪತಿ ವಿಜಯ್ ಅವರ ಆರಂಭದ ಹೆಜ್ಜೆಯಲ್ಲೇ ಸಿಕ್ಕ ಯಶಸ್ಸು ಸೋಜಿಗ.
ತಮಿಳುನಾಡಿನಲ್ಲಿ ಮುಂದಿನ ಐದು ವರ್ಷ ವಿಜಯ್ ಅವರ ಹವಾ ಜೋರಾಗಿರಲಿದೆ. ಡಿಎಂಕೆ ಕಚೇರಿಯಲ್ಲಿ ಹಾಕಲಾಗಿದ್ದ ವಿಜಯೋತ್ಸವದ ಟೆಂಟ್ಗಳನ್ನು ಕಾರ್ಯಕರ್ತರು ಹಿನ್ನಡೆಯ ಆತಂಕದಿಂದ ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಂಜೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳಲಿದ್ದು, ‘ದಳಪತಿ’ ತಮಿಳುನಾಡಿನ ಹೊಸ ‘ಸಿಎಂ’ ಆಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ನಿಶ್ಚಿತವಾಗಿದೆ.
ಟಿವಿಕೆ ಪಕ್ಷ ಸ್ವಂತವಾಗಿ 118 ಸ್ಥಾನಗಳನ್ನು ಮುಟ್ಟಿದರೆ ವಿಜಯ್ ಸಿಎಂ ಆಗುವುದರಲ್ಲಿ ಅನುಮಾನ ಇಲ್ಲ. ಬಹುಮತ ಕೊರತೆ ಬಂದರೂ ಎಐಎಡಿಎಂಕೆ ಬೆಂಬಲದೊಂದಿಗೆ ಅವರು ಸರ್ಕಾರ ರಚನೆ ಮಾಡಿ ಸಿಎಂ ಆಗುವ ಸಾಧ್ಯತೆ ಇದ್ದೇ ಇದೆ.







