ಬೆಳ್ತಂಗಡಿ: ಕಳೆದ 20 ವರ್ಷಗಳಿಂದ ಸಾರ್ವಜನಿಕರ ಕಣ್ಣಿಗೆ ಕ್ಯಾಂಟಿನ್ ಆಗಿ ಕಾಣುತ್ತಿದ್ದ ಆ ಜಾಗದಲ್ಲಿ ನಡೆಯುತ್ತಿತ್ತು ಬಣ್ಣದ ಲೋಕದ ಕರಾಳ ದಂಧೆ! ಹೌದು, ಬೆಳ್ತಂಗಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕ್ಯಾಂಟಿನ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದಿದ್ದಾರೆ.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ ಕಚೇರಿ ಪಕ್ಕದಲ್ಲೇ ಇದ್ದ ‘ಪವನ್ ಕ್ಯಾಂಟಿನ್’ ಈ ದಂಧೆಯ ಕೇಂದ್ರಬಿಂದು. ಪಡಂಗಡಿ ಗ್ರಾಮದ ನಿವಾಸಿ ಸುಂದರ್ ಶೆಟ್ಟಿ ಎಂಬವರು ಕಳೆದ ಎರಡು ದಶಕಗಳಿಂದ ಸರಕಾರಿ ಜಾಗದಲ್ಲಿ ಈ ಕ್ಯಾಂಟಿನ್ ನಡೆಸುತ್ತಿದ್ದರು. ಆದರೆ ಇಲ್ಲಿ ಭಾನುವಾರ ಮಾತ್ರ ಕ್ಯಾಂಟಿನ್ಗೆ ರಜೆ ಇರುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಮಾಲೀಕ, ಕ್ಯಾಂಟಿನ್ ಒಳಗಡೆ ಗುಟ್ಟಾಗಿ ಬೆಡ್ ರೂಂ ಮತ್ತು ಶೌಚಾಲಯ ವ್ಯವಸ್ಥೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.
ಮೇ 10ರ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಬೆಳ್ತಂಗಡಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ (55), ನಾವೂರು ನಿವಾಸಿ ಚಾಲಕ ಹುಸ್ಮಾನ್ (38) ಮತ್ತು ಕಲ್ಲೇರಿ ನಿವಾಸಿ ಹೈದರ್ (45) ಎಂಬವರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ಸ್ಥಳದಿಂದ ಮೊಬೈಲ್ ಫೋನ್ಗಳು, 5 ಸಾವಿರ ರೂಪಾಯಿ ನಗದು ಹಾಗೂ ಇನ್ನಿತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.







