ಬೆಳ್ತಂಗಡಿ : ಹೋಟೆಲ್ ಅಥವಾ ಕ್ಯಾಂಟಿನ್ಗೆ ಜನ ಹೋಗುವುದು ಊಟ-ತಿಂಡಿಗಾಗಿ. ಆದರೆ ಬೆಳ್ತಂಗಡಿಯ ಈ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದುದ್ದೇ ಬೇರೆ! ಊಟದ ಸೋಗಿನಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಅಡ್ಡೆಯನ್ನು ಬೆಳ್ತಂಗಡಿ ಪೊಲೀಸರು ಸ್ಫೋಟಿಸಿದ್ದಾರೆ. ಅಷ್ಟಕ್ಕೂ ಆ ಕ್ಯಾಂಟಿನ್ನಲ್ಲಿ ಅಡಗಿದ್ದ ಆ ಕರಾಳ ಸತ್ಯವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆಯಲ್ಲಿರುವ ‘ಪವನ್ ಕ್ಯಾಂಟಿನ್’. ಮೊದಲ ನೋಟಕ್ಕೆ ಇದು ಸಾಮಾನ್ಯ ಕ್ಯಾಂಟಿನ್ನಂತೆ ಕಂಡರೂ, ಇದರ ಒಳಗಡೆ ನಡೆಯುತ್ತಿತ್ತು ಹೈಟೆಕ್ ವೇಶ್ಯಾವಾಟಿಕೆ ದಂಧೆ. ಖಚಿತ ಮಾಹಿತಿ ಮೇರೆಗೆ ಮೇ 10ರಂದು ಸಂಜೆ 5 ಗಂಟೆಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ದಂಧೆಯ ಅಸಲಿಯತ್ತನ್ನು ಹೊರಹಾಕಿದ್ದಾರೆ.
ಕ್ಯಾಂಟಿನ್ ಮಾಲೀಕ, ಪಡಂಗಡಿ ನಿವಾಸಿ ಸುಂದರ್ ಶೆಟ್ಟಿ (55) ಮತ್ತು ಈತನಿಗೆ ಸಾಥ್ ನೀಡುತ್ತಿದ್ದ ನಾವೂರು ನಿವಾಸಿ ಉಸ್ಮಾನ್ (38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಪವನ್ ಕ್ಯಾಂಟಿನ್ ಮಾಲೀಕ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಸುಂದರ್ ಶೆಟ್ಟಿ(55) ಮತ್ತು ಸ್ನೇಹಿತ ನಾವೂರು ಗ್ರಾಮದ ಹುಸ್ಮಾನ್(38) ಎಂಬವರನ್ನು ಬಂಧಿಸಿ ಮೇ.11 ರಂದು ರಾತ್ರಿ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ಇಬ್ಬರಿಗೂ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮತ್ತೋರ್ವ ವೇಶ್ಯಾವಾಟಿಕೆ ಅಡ್ಡೆಗೆ ಗಿರಾಕಿಯಾಗಿ ಬಂದಿದ್ದ ಕಲ್ಲೇರಿ ನಿವಾಸಿ ಹೈದಾರ್ (45) ಎಂಬಾತನನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಸಾಂತ್ವನ ಕೇಂದ್ರಕ್ಕೆ: ವೇಶ್ಯಾವಾಟಿಕೆ ಪ್ರಕರಣದ ದಾಳಿ ವೇಳೆ ರಕ್ಷಣೆ ಮಾಡಲಾದ 29 ವರ್ಷದ ಮಹಿಳೆಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಮೇ. 11 ರಂದು ಹಾಜರುಪಡಿಸಿದ್ದು, ನ್ಯಾಯಾಲಯವು ಸಂತ್ರಸ್ತೆಯನ್ನು ಮಂಗಳೂರಿನ ಮುಡಿಪುವಿನಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಅತ್ಯಂತ ಶಾಕಿಂಗ್ ವಿಚಾರವೆಂದರೆ ಆ ಕ್ಯಾಂಟಿನ್ನ ವಿನ್ಯಾಸ! ಪೊಲೀಸರು ದಾಳಿ ಮಾಡಿದಾಗ ಸಂತ್ರಸ್ತ ಮಹಿಳೆ ಎಲ್ಲಿಯೂ ಕಾಣಿಸಲಿಲ್ಲ. ಆದರೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷಾ ಅವರು ಹದ್ದಿನ ಕಣ್ಣಿನಿಂದ ಹುಡುಕಾಡಿದಾಗ ಪತ್ತೆಯಾಗಿದ್ದೇ ಆ ‘ರಹಸ್ಯ ಕೊಠಡಿ’. ಆರೋಪಿ ಸುಂದರ್ ಶೆಟ್ಟಿ ಕ್ಯಾಂಟಿನ್ನ ಅಡುಗೆ ಕೋಣೆಯಲ್ಲೇ ಒಂದು ಸೀಕ್ರೆಟ್ ರೂಮ್ ನಿರ್ಮಿಸಿದ್ದ. ಪೊಲೀಸ್ ದಾಳಿ ನಡೆಯುತ್ತಿದ್ದಂತೆ ಸಂತ್ರಸ್ತ ಮಹಿಳೆಯನ್ನು ಇದೇ ಕೊಠಡಿಯಲ್ಲಿ ಅಡಗಿಸಿಡಲಾಗಿತ್ತು.







