ಬೆಳಾಲು: ತಾಲೂಕಿನ ಬೆಳಾಲು ಗ್ರಾಮದಲ್ಲಿ ಜೂನ್ 12 ರಂದು ನಡೆದಿದ್ದ ಭೀಕರ ಸ್ಕೂಟರ್ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಇಂದು (ಜೂನ್ 24) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಾಜಿ ಸೈನಿಕನ ಪುತ್ರ ದಿಯಾನ್ ನಿಧನರಾದ ದುರ್ದೈವಿ.

ಇತ್ತೀಚೆಗಷ್ಟೇ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ್ದ ಮಾಜಿ ಸೈನಿಕ ಮೋಹನ್ ಗೌಡ ಕಾಡಂಡ ಅವರು, ಜೂನ್ 12 ರಂದು ತನ್ನ ಪುತ್ರ ದಿಯಾನ್ನನ್ನು ಸ್ಕೂಟಿಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಎಂಬಲ್ಲಿ ತಲುಪುತ್ತಿದ್ದಂತೆ, ಸ್ಕೂಟರ್ನಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಸ್ಕೂಟರ್ ನಡುರಸ್ತೆಯಲ್ಲೇ ಹೊತ್ತಿ ಉರಿಯಲಾರಂಭಿಸಿತ್ತು.

ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸ್ಕೂಟರ್ ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ದಿಯಾನ್ನನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಕಳೆದ 12 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕ ದಿಯಾನ್, ಇಂದು (ಬುಧವಾರ) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.





