ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡಗೆ ವೇಣೂರು ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಒಳಗಾದ ಆರೋಪಿಗಳನ್ನು ಮೋಹನ ಗೌಡ (45), ದಿನೇಶ್ (45), ಪ್ರಶಾಂತ್ (35) ಹಾಗೂ ಧೀರಜ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 18ರಂದು ಮಧ್ಯಾಹ್ನ ಅಂಡಿಂಜೆಯ ಕಾಣಲಚ್ಚಿ ಭಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಪಿಎಸ್ಐ ಅಕ್ಷಯ ಡವಗಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದಾಗ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ಆಡಿಸುತ್ತಿರುವುದು ದೃಢಪಟ್ಟಿದೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಹಲವರು ಸ್ಥಳದಿಂದ ಕಾಲ್ಕಿತ್ತಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ 7 ಅಂಕದ ಕೋಳಿಗಳು, 3 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 72/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 3, 11(1)(m)(ii), 11(1)(n) ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 112ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






