ಬೆಳ್ತಂಗಡಿ: ಸಮಾಜಸೇವಾ ಉದ್ದೇಶದಿಂದ ಸ್ಥಾಪಿತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರೋಟರಿ ಸಂಸ್ಥೆಯ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 2 ರಂದು ಸಂಜೆ 7 ಗಂಟೆಗೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಶ್ರೀಧರ್ ಕೆ.ವಿ ತಿಳಿಸಿದ್ದಾರೆ. ಜೂನ್ 29ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಐದು ದಶಕಗಳ ಸಾರ್ಥಕ ಸೇವಾ ಇತಿಹಾಸ
ಮಂಗಳೂರು ಉತ್ತರ ರೋಟರಿ ಕ್ಲಬ್ನ ಪ್ರಾಯೋಜಕತ್ವದಲ್ಲಿ 22-12-1971 ರಲ್ಲಿ ಆರಂಭಗೊಂಡ ಬೆಳ್ತಂಗಡಿ ರೋಟರಿ ಕ್ಲಬ್, ಕಳೆದ 55 ವರ್ಷಗಳಿಂದ ತಾಲೂಕಿನಾದ್ಯಂತ ನಿರಂತರ ಜನಪರ ಕೆಲಸಗಳನ್ನು ಮಾಡುತ್ತಾ ಮಾದರಿ ಸಂಸ್ಥೆಯಾಗಿ ಬೆಳೆದಿದೆ.
ಸ್ಥಾಪಕ ಅಧ್ಯಕ್ಷರು: ಪ್ರೊ. ಎನ್.ಜೆ. ಕಡಂಬ (ನ್ಯಾಯವಾದಿ)
ಸ್ಥಾಪಕ ಕಾರ್ಯದರ್ಶಿ: ಸುಧೀರ್ ಜಿ. ಭಿಡೆ
ವಿಶೇಷ ಹೆಮ್ಮೆ: > ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ ಗೌರವ ಸದಸ್ಯರಾಗಿದ್ದಾರೆ. ಪ್ರಸ್ತುತ ವಿವಿಧ ಕ್ಷೇತ್ರಗಳ 73 ಸಾಧಕರು ಈ ಕ್ಲಬ್ನಲ್ಲಿ ಸದಸ್ಯರಾಗಿದ್ದು, ಇವರೊಂದಿಗೆ 4 ರೋಟರಿ ಸಮುದಾಯ ದಳಗಳು, 7 ಇಂಟರಾಕ್ಟ್ ಕ್ಲಬ್ಗಳು ಹಾಗೂ ಆನ್ಸ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿವೆ.
ಕಳೆದ ಸಾಲಿನ ಸಾಧನೆಗೆ ‘ಡೈಮಂಡ್ ಪ್ಲಸ್’ ಗರಿ
ಕಳೆದ ಸಾಲಿನಲ್ಲಿ ಕ್ಲಬ್ನ ಸಾರಥ್ಯ ವಹಿಸಿದ್ದ ರೊ| ಡಾ. ಪ್ರಕಾಶ್ ಪ್ರಭು, ರೊ| ಡಾ. ದಯಾಕರ್ ಮತ್ತು ಅವರ ತಂಡವು ತಾಲೂಕಿನಾದ್ಯಂತ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಅಪೂರ್ವ ಸಾಧನೆಗಾಗಿ ಜಿಲ್ಲಾ ಸಮ್ಮೇಳನದಲ್ಲಿ ಸಂಸ್ಥೆಗೆ ‘ಡೈಮಂಡ್ ಪ್ಲಸ್’ ಪದಕ ನೀಡಿ ಪುರಸ್ಕರಿಸಲಾಗಿದೆ ಎಂದು ನೂತನ ಅಧ್ಯಕ್ಷರು ಹೆಮ್ಮೆಯಿಂದ ಸ್ಮರಿಸಿದರು.

ಜಾಗತಿಕವಾಗಿ ಸುಮಾರು 200 ದೇಶಗಳ 35,000 ಕ್ಲಬ್ಗಳಲ್ಲಿ ರೋಟರಿ ಕಾರ್ಯಾಚರಿಸುತ್ತಿದ್ದು, ಬೆಳ್ತಂಗಡಿ ಘಟಕದ ಈ ವರ್ಷದ ನೂತನ ಚಟುವಟಿಕೆಗಳು ಜುಲೈ 2ರ ಪದಗ್ರಹಣದೊಂದಿಗೆ ಅಧಿಕೃತವಾಗಿ ಆರಂಭಗೊಳ್ಳಲಿವೆ.
ಈ ವರ್ಷ ಅಸಿಸ್ಟೆಂಟ್ ಗವರ್ನರ್ ಆಗಿ ರೊ.ಡಾ ಶಶಿಧರ ಡೋಂಗ್ರೆ ಅವರು ಆಯ್ಕೆಯಾಗಿರುವುದು ಅದೇ ರೀತಿ ರೋಟರಿ ಜಿಲ್ಲೆಯ ಇಂಟರಾಕ್ಟ್ ಪ್ರತಿನಿಧಿಯಾಗಿ ಎಸ್.ಡಿ.ಎಂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಉಜಿರೆಯ ಕ್ಷಿತಿಜ್ ಎಸ್ ಶೆಟ್ಟಿ ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಬೆಳ್ತಂಗಡಿ ರೋಟರಿ ಕ್ಲಬ್ನ 56 ನೇ ವರ್ಷದ ಅಧ್ಯಕ್ಷರಾಗಿ ರೊ. ಶ್ರೀಧರ್ ಕೆ.ವಿ,, ಕಾರ್ಯದರ್ಶಿಯಾಗಿ ರೊ.ಡಾ.ರಾಘವೇಂದ್ರ ಪಿದಮಲೆ, ಖಜಾಂಚಿಯಾಗಿ ರೊ. ಅಬೂಬ್ಬಕ್ಕರ್, ದಂಡಪಾಣಿಯಾಗಿ ರೊ. ವೈಕುಂಠ ಪ್ರಭು, ಹಾಗೂ ನಿರ್ದೇಶಕರಾಗಿ ವಿದ್ಯಾ ಕುಮಾರ್, ಅನಂತ ಭಟ್ ಮಚ್ಚಿಮಲೆ, ಗಾಯತ್ರಿ ದಿನೇಶ್, ಮನೋರಮಾ ಭಟ್, ಪೂರನ್ ವರ್ಮ, ಕಿರಣ್ ಹೆಬ್ಬಾರ್ ಸಂದೇಶ್ ರಾವ್, ಡಾ.ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್, ಬಿ.ಕೆ ಧನಂಜಯ ರಾವ್, ಮೆಜರ್ ಜನರಲ್ ಎಂ.ವಿ.ಭಟ್, ಪ್ರವೀಣ್ ಗೋರೆ, ಡಾ.ಶಶಿಕಾಂತ್ ಡೋಂಗ್ರೆ ಡಾ.ಗೋಪಾಲಕೃಷ್ಣ, ಡಾ.ಗೋವಿಂದ ಕಿಶೋರ್,ಯಶವಂತ ಪಟವರ್ಧನ್,ಡಿ.ಎಂ.ಗೌಡ, ಶರತಕೃಷ್ಣ ಪಡ್ವೆಟ್ನಾಯ, ಆದರ್ಶ ಕಾರಂತ್ ಸೋಮಶೇಖರ ಶೆಟ್ಟಿ,ವೆಂಕಟೇಶ್ವರ ಭಟ್ ರೇಷ್ಮಾಹೆಗ್ಡೆ ಡಾ.ಎಂ.ಎಂ.ದಯಾಕರ್ ಇವರುಗಳು ಜು.2ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ರೊ.ಯಶಸ್ವಿ ಸೋಮಶೇಖರ್, ಸಹಾಯಕ ಗವರ್ನರ್ ರೊ. ಡಾ. ಶಶಿಧರ ಡೋಂಗ್ರೆ ಹಾಗೂ ವಲಯ ಸೇನಾನಿ ರೊ.ಬೇಬಿ ಕುಂದರ್ ಅವರ ಉಪಸ್ಥಿತಿಯಲ್ಲಿ ಅಧಿಕಾರವನ್ನು ವಹಿಸಲಿದ್ದಾರೆ ಎಂದರು.

ಸೇವಾ ಕಾರ್ಯಕ್ರಮಗಳು:
ಬೆಳ್ತಂಗಡಿ ರೋಟರಿಯು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ.
“Create lasting impact ” ಅಂದರೆ ಶಾಶ್ವತ ಬದಲಾವಣೆಗೆ ನಾಂದಿ ಹಾಡೋಣ” ಎಂಬ ಧೈಯವಾಕ್ಯದೊಂದಿಗೆ ಈ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ನಮ್ಮ ಜಿಲ್ಲಾ ಗವರ್ನರ್ ಅವರ ಕಲ್ಪನೆಯಂತೆ, ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನ ಅಂಗನವಾಡಿಗಳ ಹಾಗೂ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲೆಗಳಿಗೆ ಕಲಿಕಾ ಉಪಕರಣಗಳ ಕೊಡುಗೆ, ಶಾಲೆಗಳಗೆ ಸೋಲಾರ್ ವಿದ್ಯುದ್ದೀಕರಣ ಅಳವಡಿಸಲಿದ್ದೇವೆ.
ಪರಿಸರ ಜಾಗೃತಿ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ವನಮಹೋತ್ಸವ ಮತ್ತು ಜಾಗೃತಿಗಾಗಿ ಮಳೆನಡಿಗೆಯನ್ನು ಜುಲೈ ತಿಂಗಳಿನಲ್ಲಿ ಅಯೋಜಿಸಲಾಗಿದೆ. ಸಮುದಾಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದ್ದೇವೆ. ತಾಲೂಕಿನ ಶಾಲಾ ಶಿಕ್ಷಕರ ಕೌಶಲ್ಯವರ್ಧನೆಗಾಗಿ ತರಬೇತಿ ಶಿಬಿರದ ಯೋಜನೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಸಿಸ್ಟೆಂಟ್ ಗವರ್ನರ್ ಡಾ.ಶಶಿಧರ ಡೋಂಗ್ರೆ, ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ಉಪಸ್ಥಿತರಿದ್ದರು.







