ಹೈದರಾಬಾದ್: ಮದುವೆಯಾಗಿ ಕೇವಲ ಹದಿನೆಂಟು ತಿಂಗಳು.. ಹೊಟ್ಟೆಯಲ್ಲಿ ಐದು ತಿಂಗಳ ಹಸುಗೂಸು.. ಮುಂದಿನ ದಿನಗಳಲ್ಲಿ ಸೀಮಂತದ ಸಂಭ್ರಮ ಸವಿಯಬೇಕಾಗಿದ್ದ ಆ 23 ವರ್ಷದ ಗರ್ಭಿಣಿ, ಇಂದು ಹೆಣವಾಗಿದ್ದಾಳೆ! ಅದಕ್ಕೆ ಕಾರಣ ಬೇರೇನೂ ಅಲ್ಲ, ಸ್ವತಃ ಹೆತ್ತ ಗಂಡ ಮತ್ತು ಅತ್ತೆ ನೀಡಿದ ಅಮಾನುಷ ಮಾನಸಿಕ ಕಿರುಕುಳ.

ಗರ್ಭದಲ್ಲಿರುವ ಮಗುವಿನ ಪಿತೃತ್ವವನ್ನು ಶಂಕಿಸಿ, ಡಿಎನ್ಎ ಪರೀಕ್ಷೆ ನಡೆಸುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಮನನೊಂದ ಐದು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಮೇದಕ್ (Medak) ಜಿಲ್ಲೆಯ ಅಲ್ಲಾದುರ್ಗ್ದ (Alladurg) ಗಡಿಪೆದ್ದಾಪುರ (Gadipeddapur) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಶ್ಮಿತಾ (23) ಎಂದು ಗುರುತಿಸಲಾಗಿದೆ. 18 ತಿಂಗಳ ಹಿಂದೆಯಷ್ಟೇ ಸುಶ್ಮಿಕಾ ಹಾಗೂ ಜಿ.ಅಭಿಲಾಷ್ ಮದುವೆಯಾಗಿದ್ದರು. ಸದ್ಯ ಸುಶ್ಮಿತಾ 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.ಈ ಸಂಬಂಧ ಮೃತ ಸುಶ್ಮಿತಾ ತಾಯಿ ಜಾನಾಬಾಯಿ ಅವರು ದೂರು ನೀಡಿದ್ದಾರೆ. ಪತಿ ಅಭಿಲಾಷ್ ನನ್ನ ಮಗಳ ನಡತೆಯನ್ನು ಶಂಕಿಸುತ್ತಿದ್ದ. ಅಲ್ಲದೇ ದೈಹಿಕ ಮತ್ತು ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದ. ಅತ್ತೆಯೂ ಕೂಡ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.


ಇತ್ತೀಚಿಗೆ ಜೂನ್ 23ರಂದು ಸುಶ್ಮಿತಾ ಸೀಮಂತದ ಬಗ್ಗೆ ಮಾತನಾಡಲು ನಾವು ಮಗಳ ಮನೆಗೆ ಹೋಗಿದ್ದೆವು. ಈ ವೇಳೆ ಎರಡು ಕುಟುಂಬದ ಸಮ್ಮುಖದಲ್ಲಿಯೇ ಅಭಿಲಾಷ್ ಗಲಾಟೆ ಮಾಡಿ, ಸುಶ್ಮಿತಾ ಗರ್ಭದಲ್ಲಿರುವ ಮಗುವಿನ ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ಹಠ ಹಿಡಿದಿದ್ದ. ಆಗ ಅಲ್ಲಿದ್ದವರು ಮಧ್ಯಪ್ರವೇಶಿಸಿ, ಆತನಿಗೆ ಬುದ್ಧಿಮಾತು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೆ ಇದಾದ ಮೇಲೆಯೂ ಕಿರುಕುಳ ಮುಂದುವರಿದಿತ್ತು. ಅದಾದ ಎರಡು ದಿನಗಳ ಬಳಿಕ ಸುಶ್ಮಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 85, 108ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಾದುರ್ಗ್ ಪೊಲೀಸರು ಆರೋಪಿ ಪತಿ ಜಿ.ಅಭಿಲಾಷ್ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಡಿ.ಶಂಕರ್ ತಿಳಿಸಿದ್ದಾರೆ.

ಇಬ್ಬರನ್ನೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದಿದ್ದಾರೆ.







