ಕಟಪಾಡಿ: ಇಲ್ಲಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ವೆಂಕಟರಮಣ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ SSLC ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಗೆ ಶೇಕಡಾ 100 ರಷ್ಟು ಫಲಿತಾಂಶ ಲಭಿಸಿದ್ದು, ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆದು ಸಾಧನೆಗೈದ ಶ್ರೀವತ್ಸ ಶರ್ಮ ರವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಇದರೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಉಳಿದ 31 ವಿದ್ಯಾರ್ಥಿಗಳನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಲಾಯಿತು.

ಕಲಿಯಲು ಆಶೆ ಇರುವ ಮಕ್ಕಳನ್ನು ನಮ್ಮ ಕೈಗೆ ಕೊಡಿ: ದೇವೇಂದ್ರ ನಾಯಕ್
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಕ್ಷಣಿಕ ಸಲಹೆಗಾರರಾದ ದೇವೇಂದ್ರ ನಾಯಕ್ ಅವರು, “ಕಲಿಯಲು ಆಶೆ ಇರುವ ಎಷ್ಟೇ ದಡ್ಡ ಮಕ್ಕಳನ್ನಾದರೂ ನಮ್ಮ ಕೈಗೆ ಕೊಡಿ, ಅವರಿಗೆ ಸೂಕ್ತ ರೀತಿಯಲ್ಲಿ ಕಲಿಸಿ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದು” ಎಂದು ಪೋಷಕರಿಗೆ ಭರವಸೆ ನೀಡಿದರು.
ಸಮಾಜ ನಿರ್ಮಾಣದಲ್ಲಿ ಮೂವರ ಪಾತ್ರ ಮುಖ್ಯ: ದಾಮೋದರ ಶರ್ಮಾ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾಮೋದರ ಶರ್ಮಾ ಅವರು ಮಾತನಾಡಿ, “ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಷ್ಟೇ ಅಲ್ಲದೆ ಸಂಸ್ಕಾರವಂತರಾಗಬೇಕು. ಜವಾಬ್ದಾರಿಯುತ ಪಾಲಕರು, ಶಿಸ್ತುಬದ್ಧ ಶಿಕ್ಷಕರು ಹಾಗೂ ಸಂಸ್ಕಾರವಂತ ವಿದ್ಯಾರ್ಥಿಗಳು ಒಟ್ಟಾಗಿ ಸೇರಿದರೆ ಮಾತ್ರ ಒಂದು ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯ” ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ದಾಮೋದರ ಶರ್ಮ ಅವರಿಗೆ ಸಂಸ್ಥೆಯ ಸಂಚಾಲಕರಾದ ಕೆ. ಸತ್ಯೇಂದ್ರ ಪೈ ಅವರು ಶಾಲು ಹೊದಿಸಿ, ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಸಂಸ್ಥೆಯ ಮೇಲೆ ಇರಿಸಿದ ವಿಶ್ವಾಸಕ್ಕೆ ಚ್ಯುತಿ ಬರುವುದಿಲ್ಲ: ಕೆ. ಸತ್ಯೇಂದ್ರ ಪೈ
ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಂಚಾಲಕ ಕೆ. ಸತ್ಯೇಂದ್ರ ಪೈ ಅವರು, ಪೋಷಕರು ಮತ್ತು ಸಾರ್ವಜನಿಕರು ಸಂಸ್ಥೆಯ ಮೇಲ ಇರಿಸಿರುವ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬರದಂತೆ ಮುಂದೆಯೂ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ. ಸಿ. ಪೈ, ಶ್ರೀನಿವಾಸ ಶೇಣೈ, ವೆಂಕಟರಮಣ ಭಟ್, ಗಣೇಶ್ ಶೇಣೈ, ರಾಘವೇಂದ್ರ ಆಚಾರ್ಯ, ಶಾಲೆಯ ಮಾಜಿ ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ ಸೇರಿದಂತೆ ಹಿತೈಷಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.





