ಮಂಗಳೂರು, ಜೂ.29: ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಭೀಕರ ಘಟನೆ ಸೋಮವಾರ ಬೆಳಗ್ಗಿನ ಜಾವ ಬೈಕಂಪಾಡಿಯಲ್ಲಿ ನಡೆದಿದೆ.

ಕೇರಳದ ಪಯ್ಯನ್ನೂರು ನಿವಾಸಿ ವಿಕಾಸ್ ಎಂಬುವವರೇ ದರೋಡೆಗೊಳಗಾದ ಉದ್ಯಮಿ. ಇವರು ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ನಡೆದ ಸ್ನೇಹಿತರೊಬ್ಬರ ಮದುವೆಗೆ ತೆರಳಿ ಕಾರಿನಲ್ಲಿ ಊರಿಗೆ ಹಿಂದಿರುಗುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 2:30ರ ವೇಳೆಗೆ ಇವರ ಕಾರು ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ ದರೋಡೆಕೋರರು ಸ್ಕೆಚ್ ಹಾಕಿದ್ದಾರೆ. ಮೂರು ಕಾರುಗಳಲ್ಲಿ ಬಂದ ಸುಮಾರು 7 ರಿಂದ 8 ಮಂದಿ ದರೋಡೆಕೋರರ ಗ್ಯಾಂಗ್, ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದೆ.

ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮೊದಲು ಉದ್ಯಮಿ ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಕ್ಕೆ ಇಳಿಸಿದ್ದಾರೆ. ಆದಾದ ಬಳಿಕ ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿಕೊಂಡು ಪಣಂಬೂರು ಬೀಚ್ ರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ. ಅಲ್ಲಿ ಪತ್ನಿ ಮತ್ತು ಮಗನ ಬಳಿಯಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ ದರೋಡೆಕೋರರು, ಅವರಿಬ್ಬರನ್ನು ರಸ್ತೆಯಲ್ಲೇ ಬಿಟ್ಟು ಕಾರಿನೊಂದಿಗೆ ನಾಪತ್ತೆಯಾಗಿದ್ದಾರೆ.

ಘಟನೆಯಿಂದ ಆಘಾತಕ್ಕೊಳಗಾದ ಉದ್ಯಮಿ ವಿಕಾಸ್ ಅವರು ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದು, ದರೋಡೆಕೋರರ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.





