ಉಡುಪಿ: ಉಡುಪಿಯ ಮಲ್ಪೆ ನಿವಾಸಿ ಸಂದೀಪ್ ಸಾಲ್ಯಾನ್ ಅವರ ನಿಗೂಢ ಸಾವು ಪ್ರಕರಣಕ್ಕೆ ಈಗ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವು ಅಂತಲೇ ನಂಬಲಾಗಿದ್ದ ಈ ಕೇಸ್, ಈಗ ಅಸಲಿಗೆ ಹನಿಟ್ರ್ಯಾಪ್ ಮಾದರಿಯ ಭೀಕರ ಕೊಲೆ ಅನ್ನೋದು ತನಿಖೆಯಿಂದ ಬಯಲಾಗಿದೆ! ಹೌದು, ಈ ವ್ಯವಸ್ಥಿತ ಕೊಲೆಯ ಮಾಸ್ಟರ್ ಮೈಂಡ್ ಒಬ್ಬಳು ಮಹಿಳೆ ಅನ್ನೋದು ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದೆ. ಹಾಗಾದ್ರೆ ಯಾರು ಆ ಕಿರಾತಕಿ? ಆಕೆ ಈ ಕೃತ್ಯ ಎಸಗಿದ್ದು ಯಾಕೆ?

ಉಡುಪಿಯ ಮಲ್ಪೆ ನಿವಾಸಿ ಸಂದೀಪ್ ಸಾಲ್ಯಾನ್ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣದ ಪ್ರಮುಖ ಆರೋಪಿ ಅಕ್ಷತಾಳನ್ನು ಕೊನೆಗೂ ಕ್ಯಾಲಂಗುಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಅಕ್ಷತಾ ಮೂಲತಃ ಮಂಗಳೂರಿನವಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಸಂದೀಪ್ ಸಾಲ್ಯಾನ್ ನಾಪತ್ತೆಯಾಗಿ, ಬಳಿಕ ಅವರ ಶವ ಪತ್ತೆಯಾದಾಗಿನಿಂದಲೂ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಮೊದಲಿಗೆ ಇದೊಂದು ನಿಗೂಢ ಸಾವು ಎಂದೇ ಬಿಂಬಿತವಾಗಿತ್ತು. ಆದರೆ ಪೊಲೀಸರು ಕೇಸ್ ಅನ್ನು ಆಳವಾಗಿ ಕೆದಕಿದಾಗ ಸಿಕ್ಕಿದ್ದು ಶಾಕಿಂಗ್ ಸುಳಿವುಗಳು!
ಕತ್ತನ್ನು ಕಟ್ಟರ್ನಿಂದ ಕೊಯ್ದು ಭೀಕರ ಕೊಲೆ!
ಪೊಲೀಸ್ ವಿಚಾರಣೆ ವೇಳೆ ಆರೋಪಿ ಅಕ್ಷತಾ ನಡೆಸಿರುವ ಈ ವ್ಯವಸ್ಥಿತ ಕೊಲೆಯ ಭೀಕರತೆ ಬಯಲಾಗಿದೆ. ರೆಸಾರ್ಟ್ ರೂಂ ಒಂದರಲ್ಲಿ ಸಂದೀಪ್ ಅವರ ಕತ್ತನ್ನು ಕಟ್ಟರ್ ಬಳಸಿ ಅತಿ ಕ್ರೂರವಾಗಿ ಕೊಯ್ದು ಈಕೆ ಕೊಲೆ ಮಾಡಿದ್ದಾಳೆ. ಕೇವಲ ಕೊಲೆ ಮಾಡುವುದಷ್ಟೇ ಈಕೆಯ ಪ್ಲಾನ್ ಆಗಿರಲಿಲ್ಲ, ಕೊಲೆಯ ಬಳಿಕ ಸಂದೀಪ್ ಬಳಿ ಇದ್ದ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಭಾರಿ ಪ್ರಮಾಣದ ನಗದನ್ನು ದೋಚಿಕೊಂಡು ಈ ಕಿರಾತಕಿ ಅಲ್ಲಿಂದ ಪರಾರಿಯಾಗಿದ್ದಳು.
ತಲೆಮರೆಸಿಕೊಂಡಿದ್ದ ಕಿರಾತಕಿ ಈಗ ಪೊಲೀಸ್ ವಶಕ್ಕೆ!
ಸಂದೀಪ್ ಸಾವಿನ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಅಕ್ಷತಾಳನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದರು. ಕೊನೆಗೂ ಗೋವಾದ ಕ್ಯಾಲಂಗುಟ್ ಪೊಲೀಸರು ಆರೋಪಿ ಅಕ್ಷತಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸದ್ಯಕ್ಕೆ ಎದ್ದಿರುವ ದೊಡ್ಡ ಪ್ರಶ್ನೆ ಎಂದರೆ, ಈ ಕೊಲೆಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರಾ? ಅಥವಾ ಕೇವಲ ಹಣ, ಒಡವೆಗಾಗಿಯೇ ಈ ಕೊಲೆ ನಡೆದಿದೆಯಾ? ಅಥವಾ ಇದರ ಹಿಂದೆ ಬೇರೇನಾದರೂ ಹನಿಟ್ರ್ಯಾಪ್ ಜಾಲವಿದೆಯಾ? ಎಂಬ ಸಂಪೂರ್ಣ ಸತ್ಯಾಂಶ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಹಣದ ಆಸೆಗಾಗಿ ರೆಸಾರ್ಟ್ ರೂಮ್ನಲ್ಲಿ ನಡೆದ ಈ ಭೀಕರ ಕೊಲೆ ಸದ್ಯ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪೊಲೀಸರ ಮುಂದಿನ ತನಿಖೆಯಿಂದ ಈ ಕೊಲೆಯ ಹಿಂದಿನ ಅಸಲಿ ಸತ್ಯ ಮತ್ತು ಈಕೆಯ ಜೊತೆಗಿರುವ ಇತರರ ಮುಖವಾಡ ಕಳಚಬೇಕಿದೆ.





