ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮತ್ತೊಮ್ಮೆ ವೇಗದ ಅಟ್ಟಹಾಸಕ್ಕೆ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ! ತ್ರಾಸಿ ಬೀಚ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ಈ ದಾರುಣ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಸಣಭಾವಿ ನಿವಾಸಿ 23 ವರ್ಷದ ದೀಪಕ್ ನಾಗಪ್ಪ ನಾಯ್ಕ್ ಹಾಗೂ ಹಡವು ನಿವಾಸಿ 63 ವರ್ಷದ ಪೆಟ್ರಿಕ್ ವಾಜ್ ಅಪಘಾತದಲ್ಲಿ ಕೊನೆಯುಸಿರೆಳೆದ ದುರ್ದೈವಿಗಳು.
ಬೈಂದೂರು ಕಡೆಯಿಂದ ಕುಂದಾಪುರದತ್ತ ಬೈಕ್ನಲ್ಲಿ ತೆರಳುತ್ತಿದ್ದ ದೀಪಕ್ ಅವರ ವಾಹನಕ್ಕೆ, ಎದುರು ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡಿದ್ದ ದೀಪಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಮೃತಪಟ್ಟರೆ, ಸ್ಕೂಟರ್ನಲ್ಲಿದ್ದ ಪೆಟ್ರಿಕ್ ವಾಜ್ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಘಟನೆಯಲ್ಲಿ ಪೆಟ್ರಿಕ್ ವಾಜ್ ಅವರ ಪುತ್ರಿಗೂ ಗಂಭೀರ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಅಪಘಾತ ಸಂಭವಿಸಿದ ತಕ್ಷಣ ಗಂಗೊಳ್ಳಿ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಸ್ತೆಯಲ್ಲಿ ಪ್ರಯಾಣಿಸುವಾಗ ನಿಮ್ಮ ವೇಗದ ಮೇಲಿರಲಿ ನಿಯಂತ್ರಣ. ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೀಟ್ಬೆಲ್ಟ್ ಧರಿಸಿ, ಎದುರಿನ ವಾಹನಗಳ ಚಲನವಲನದ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಒಂದು ಕ್ಷಣದ ಜಾಗರೂಕತೆ ಮತ್ತೊಂದು ಜೀವವನ್ನು ಉಳಿಸಬಹುದು.






