ಪುತ್ತೂರು: ಪುತ್ತೂರು ತಾಲೂಕು ಕಚೇರಿಯಲ್ಲಿ ಕೆಲಸದ ನಿಮಿತ್ತ ಆಗಮಿಸಿದ್ದ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದುಬಿದ್ದ ಕಾಂಗ್ರೆಸ್ ಮುಖಂಡ ನಿರಂಜನ ರೈ ಮಠಂತಬೆಟ್ಟು ಅವರು ಜುಲೈ 8ರಂದು ಮೃತಪಟ್ಟಿದ್ದಾರೆ.

ಕಚೇರಿಯಲ್ಲಿ ದಿಢೀರ್ ಅಸ್ವಸ್ಥರಾಗುತ್ತಿದ್ದಂತೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ನಿರಂಜನ ರೈ ಅವರು ಕೋಡಿಂಬಾಡಿ ಮಹಿಷಮರ್ಧಿನಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದರು. ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಕಂಬಳ ಸ್ಪರ್ಧೆಗಳಲ್ಲಿ ತಮ್ಮ ಅದ್ಭುತ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದರು.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಜನಸಾಮಾನ್ಯರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಅವರ ಸರಳ ವ್ಯಕ್ತಿತ್ವ, ಜನಸ್ನೇಹಿ ನಡವಳಿಕೆ ಹಾಗೂ ಸಮಾಜಮುಖಿ ಕಾರ್ಯಗಳು ಅಪಾರ ಜನಾನುರಾಗ ಗಳಿಸಿದ್ದವು. ಅವರ ನಿಧನಕ್ಕೆ ಪುತ್ತೂರು ಭಾಗದ ಸಾರ್ವಜನಿಕರು ಹಾಗೂ ಮುಖಂಡರು ತೀವ್ರ ಕಂಬನಿ ಮಿಡಿದಿದ್ದಾರೆ.






