ಕಟಪಾಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಚೌಕಟ್ಟಿನೊಳಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸರ್ಕಾರಿ ನೌಕರರಿಗೆ ಸಮಾಜದಲ್ಲಿ ನಿಜವಾದ ಗೌರವ ಮತ್ತು ವೃತ್ತಿ ಜೀವನದ ಆತ್ಮತೃಪ್ತಿ ದೊರೆಯುತ್ತದೆ ಎಂದು ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜಮತ್ ಆಲಿ ಹೇಳಿದರು.

ಕಟಪಾಡಿ ಗ್ರಾಮ ಪಂಚಾಯಿತಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಮಸ್ತ ನಾಗರಿಕರ ಆಶ್ರಯದಲ್ಲಿ, ಕಟಪಾಡಿ ಹೊರಠಾಣೆಯಲ್ಲಿ ಉಪಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಎಸ್ಐ ದಯಾನಂದ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ನಾಗರಿಕ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳ ನಿಷ್ಠಾವಂತ ಸೇವೆಯನ್ನು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಗುರುತಿಸಿ ಗೌರವಿಸುತ್ತಿರುವುದು ಇಡೀ ಇಲಾಖೆಗೆ ಹೆಮ್ಮೆಯ ಸಂಗತಿ ಎಂದರು.
ಪೊಲೀಸ್ ವೃತ್ತಿ ಅಧಿಕಾರ ಪ್ರದರ್ಶನದ ವೇದಿಕೆಯಲ್ಲ;
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಜನರ ವಿಶ್ವಾಸ ಕಾಪಾಡುವ ಜವಾಬ್ದಾರಿಯುತ ಸೇವೆಯಾಗಿದೆ. ಸಾರ್ವಜನಿಕರೊಂದಿಗೆ ಮಾನವೀಯತೆ ಮತ್ತು ಕಾನೂನಿನ ಪರಿಧಿಯೊಳಗೆ ಕಾರ್ಯನಿರ್ವಹಿಸಿದಾಗ ಮಾತ್ರ ಪೊಲೀಸ್ ಸೇವೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಟಪಾಡಿ ಎಸ್ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಸತ್ಯೇಂದ್ರ ಪೈ, ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ನಲ್ಲಿ ಸುಗಮ ವಾಹನ ಸಂಚಾರ ಹಾಗೂ ಅಪಘಾತ ನಿಯಂತ್ರಣದಲ್ಲಿ ಕಟಪಾಡಿ ಹೊರಠಾಣಾ ಪೊಲೀಸರ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು. ಎಎಸ್ಐ ದಯಾನಂದ್ ಅವರ ನೇತೃತ್ವದ ತಂಡ ಹಗಲಿರುಳು ಶ್ರಮಿಸಿ ಅನೇಕ ಅಪಘಾತಗಳನ್ನು ತಡೆಗಟ್ಟುವ ಮೂಲಕ ಸಾರ್ವಜನಿಕರ ಜೀವ ಹಾಗೂ ಆಸ್ತಿಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ ಎಂದರು.
ಸಮಾರಂಭದಲ್ಲಿ ನಿವೃತ್ತ ಎಎಸ್ಐ ದಯಾನಂದ್ ಅವರನ್ನು ನಾಗರಿಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಿಬ್ಬಂದಿಗಳಾದ ವಿಜಯ್ ಉದ್ಯಾವರ, ಸದಾನಂದ ಎಸ್. ಬಂಗೇರ, ರುಕ್ಮಯಾ, ಮೋಹನ್ ಚಂದ್ರ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಲಕ್ಷ್ಮೀನಾರಾಯಣ ರಾವ್, ಸೋಮನಾಥ ಸೇರ್ವೇಗಾರ್, ಪುಷ್ಪಾ ದೇವಾಡಿಗ, ಲಕ್ಷ್ಮಿ ಸಾಲ್ಯಾನ್ ಮತ್ತು ಕಾಮಿನಿ ಅವರನ್ನು ಗೌರವಿಸಲಾಯಿತು.
ಕಟಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿ ಐ, ಪ್ರೊಬೆಷನರಿ ಎಸ್ಐ ಮಹಮ್ಮದ್ ಶಿಫಾಜ್, ಡಾ. ಯು.ಕೆ. ಶೆಟ್ಟಿ, ಡಾ. ಎ. ರವೀಂದ್ರನಾಥ ಶೆಟ್ಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಟಪಾಡಿ ಎಸ್ವಿಎಸ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಒ ತಿಲಕ್ರಾಜ್ ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಸುಧೀರ್ ಡಿ. ಬಂಗೇರ ವಂದಿಸಿದರು.






