ಸುರತ್ಕಲ್ : ಮದರಸದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಹೊಡೆದರೆಂಬ ಕಾರಣಕ್ಕೆ, ಕೋಪಗೊಂಡ ಬಾಲಕನ ಕುಟುಂಬಸ್ಥರು ಮಸೀದಿಯೊಳಗೆ ನುಗ್ಗಿ ಧರ್ಮಗುರುಗಳ (ಉಸ್ತಾದ್) ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಕೃಷ್ಣಾಪುರದ ತೈಭ ಮಸೀದಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ:
ಸ್ಥಳೀಯ ಮಸೀದಿಯ ಮದರಸದಲ್ಲಿ ಇಲ್ಟ್ ಕಲಿಯುತ್ತಿದ್ದ ಬಾಲಕನಿಗೆ ಉಸ್ತಾದ್ ಅವರು ಹೊಡೆದಿದ್ದರು ಎನ್ನಲಾಗಿದೆ. ಇದರಿಂದ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವಿಷಯ ತಿಳಿದ ಬಾಲಕನ ಚಿಕ್ಕಪ್ಪ, ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಮಸೀದಿಗೆ ಧಾವಿಸಿದ್ದಾರೆ. ಈ ವೇಳೆ ಮಸೀದಿಯ ಕೊಠಡಿಯೊಂದರಲ್ಲಿ ಉಸ್ತಾದ್ ಅವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಒಳನುಗ್ಗಿದ ಕುಟುಂಬಸ್ಥರು ತೀವ್ರ ವಾಕ್ಸಮರ ನಡೆಸಿದ್ದಾರೆ.
ವೀಡಿಯೋದಲ್ಲಿ ದಾಖಲಾಗಿರುವಂತೆ, ಬಾಲಕನ ತಾಯಿ ಮತ್ತು ಚಿಕ್ಕಪ್ಪ ಉಸ್ತಾದ್ ಅವರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ಕಮಿಟಿ ಸದಸ್ಯರು “ಏನೇ ಇದ್ದರೂ ಕಮಿಟಿ ಮುಂದೆ ಬಂದು ಮಾತನಾಡಿ, ನಾವೊಂದು ತೀರ್ಮಾನ ಕೈಗೊಳ್ಳೋಣ, ಕಾನೂನು ಕೈಗೆತ್ತಿಕೊಳ್ಳಬೇಡಿ” ಎಂದು ಮನವಿ ಮಾಡಿದರೂ ಕೇಳದ ಬಾಲಕನ ಚಿಕ್ಕಪ್ಪ, ಏಕಾಏಕಿ ಉಸ್ತಾದ್ ಅವರ ಮೇಲೆ ನುಗ್ಗಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಬಹಿರಂಗವಾಗಿ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾನೆ.




