ಬೆಳ್ತಂಗಡಿ: ಭಾರತದ ಸ್ವಾತಂತ್ರ್ಯದ ಇತಿಹಾಸವೇ ಬಹುತ್ವ ಮತ್ತು ಬಂಧುತ್ವವಾಗಿದೆ. ಇಲ್ಲಿ ಜಾತಿ ಧರ್ಮದ ವ್ಯತ್ಯಾಸಗಳಿಲ್ಲದೆ ಭಾರತ ಎಂಬ ಧ್ಯೇಯದಿಂದ ಹೋರಾಡಿದ್ದರ ಪರಿಣಾಮ ಈ ಸುಂದರ ದೇಶದ ಆಶಯ ಇಂದಿಗೂ ಭದ್ರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಗುರುವಾಯನಕೆರೆ ಬಿಬಿಎಸ್ ಸಭಾಂಗಣದಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ವತಿಯಿಂದ ಭಾರತದ “ಬಹುತ್ವ- ಬಂಧುತ್ವ” ವಿಚಾರ ವಿಮರ್ಷೆ ಹಾಗೂ ಮಿಲಾದ್ ಸಂದೇಶ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪ್ರವಾದಿಯವರ ಮೌಲಿದ್ ಪಾರಾಯಣಕ್ಕೆ ದುಆದ ಮೂಲಕ ಅಬ್ದುಲ್ಲಕುಂಞಿ ದಾರಿಮಿ ಚಾಲನೆ ನೀಡಿದರು. ಮೂರು ಮತ ಧರ್ಮಗಳ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹಾಫೀಝ್ ಮೊಹೀನುದ್ದೀನ್ ಹಮ್ಜಾಡಿ ಇಸ್ಲಾಂ ಧರ್ಮ ಮತ್ತು ಪ್ರವಾದಿಯವರ ಸ್ನೇಹ ಸಂದೇಶದ ಬಗ್ಗೆ, ರೆ.ಫಾ. ರೋಷನ್ ಕ್ರಾಸ್ತಾ ಕ್ರೈಸ್ತ ಧರ್ಮದಲ್ಲಿ ಶಾಂತಿ ಪ್ರೀತಿ ತ್ಯಾಗಕ್ಕಿರುವ ಮಹತ್ವದ ಬಗ್ಗೆ ಹಾಗೂ ಶಿಕ್ಷಕ ಜಗನ್ನಾಥ ಅವರು ಹಿಂದೂ ಧರ್ಮ ಮತ್ತು ಪ್ರಸ್ತುತ ಸಮಾಜ ಶಿಕ್ಷಣದಲ್ಲಿ ಪರಿವರ್ತನೆಯಾಗುತ್ತಿರುವ ಬಗ್ಗೆ ತಮ್ಮ ಸಂದೇಶ ನೀಡಿದರು. ಹಾಜಿ ಹಸೈನಾರ್ ಶಾಫಿ ಶುಭ ಕೋರಿದರು.
ಸಯ್ಯಿದ್ ಎಸ್ ಎಂ ಕೋಯ ತಂಙಳ್ ಉಜಿರೆ ಉದ್ಘಾಟಿಸಿದರು. ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ, ಹಾಜಿ ಉಸ್ಮಾನ್ ಶಾಫಿ, ಉಸ್ಮಾನ್ ಸಖಾಫಿ, ಉಮರ್ ಮಟನ್, ಹೈದರ್ ಮದ್ದಡ್ಕ, ಎಂ.ಹೆಚ್ ಅಬೂಬಕ್ಕರ್, ಹೆಚ್ ಎಂ ಹಸನಬ್ಬ, ಉಸ್ಮಾನ್ ಹಾಜಿ ಮದ್ದಡ್ಕ, ಮುಸ್ತಫಾ, ಅಬ್ದುಲ್ ರಹಮಾನ್, ರಫೀಕ್ ಮುಸ್ಲಿಯಾರ್, ಹಂಝ ಜಾರಿಗೆಬೈಲು, ಅಬೂಸ್ವಾಲಿಹ್ ಗೇರುಕಟ್ಟೆ, ಹಾಫಿಲ್ ಹನೀಫ್ ಮಿಸ್ಬಾಹಿ ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಕೆಎಂಜೆ ಸರ್ಕಲ್ ಮತ್ತು ಯೂನಿಟ್ ನಾಯಕರು, ಎಸ್ವೈಎಸ್, ಎಸ್ಸೆಸ್ಸೆಫ್, ಪದಾಧಿಕಾರಿಗಳು ಭಾಗವಹಿಸಿದ್ದರು. ಅಬ್ದುಲ್ ಹಮೀದ್ ಫುರ್ಕಾನಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್ ಉಮರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಸೈನಿಕ ಮುಹಮ್ಮದ್ ರಫಿ ವಂದಿಸಿದರು.







