ಮಂಗಳೂರು: ಮಂಗಳೂರಿನಲ್ಲಿ ಮೊಬೈಲ್ ವಿಚಾರಕ್ಕೆ ನಡೆದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ!

ಸ್ವಂತ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್ ಬಳಿ ನಡೆದಿದೆ.
ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಭೀಕರ ಕೃತ್ಯವೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಆರೋಪಿ ಬೇರಾರೂ ಅಲ್ಲ, ಆತನ ಕಿರಿಯ ಸಹೋದರ ರಾಜು (36).

ಮೂಲತಃ ಬೆಳಗಾವಿಯ ಈ ಕುಟುಂಬ ಕೊಟ್ಟಾರ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದರೆ, ಇಬ್ಬರು ಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದರು.

ಇಬ್ಬರೂ ಅಣ್ಣ-ತಮ್ಮಂದಿರಿಗೆ ಕುಡಿತದ ಚಟವಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ 10:30 ರ ಸುಮಾರಿಗೆ ಮೊಬೈಲ್ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದೇ ತಡ, ಕೋಪಗೊಂಡ ತಮ್ಮ ರಾಜು ಚಾಕುವಿನಿಂದ ಅಣ್ಣ ಅಡಿವೆಪ್ಪನಿಗೆ ಇರಿದಿದ್ದಾನೆ.

ಅಂಗಡಿ ಮುಚ್ಚಿ ಮನೆಗೆ ಬಂದ ತಾಯಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡು ಆಘಾತವಾಗಿದೆ. ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಅಡಿವೆಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜು ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕ್ಷುಲ್ಲಕ ಮೊಬೈಲ್ ವಿಚಾರಕ್ಕೆ ಹುಟ್ಟಿಕೊಂಡ ಜಗಳ, ಮದ್ಯದ ಅಮಲಿನಲ್ಲಿ ಸ್ವಂತ ಅಣ್ಣನ ಪ್ರಾಣವನ್ನೇ ತೆಗೆಯುವ ಹಂತಕ್ಕೆ ತಲುಪಿರುವುದು ನಿಜಕ್ಕೂ ದುರಂತ.







