ಬೆಂಗಳೂರು: ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಕೋಟಿ ಚೆನ್ನಯ್ಯ ಟ್ರೋಫಿ – ಸೀಸನ್ 2” ಬ್ಯಾಡ್ಮಿಂಟನ್ ಕ್ರೀಡಾಕೂಟವು 19-07-2026, ಭಾನುವಾರ ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಬೆಳಿಗ್ಗೆ ಸುಮಾರು 7:45 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಿತ್ಯಾನಂದ ಶೆಟ್ಟಿ ಹಾಗೂ ಶ್ರೀ ನಂಜುಂಡ ಪೂಜಾರಿ ಅವರು, ಘಟಕದ ಅಧ್ಯಕ್ಷರಾದ ಶ್ರೀ ವಿಜೇತ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಂಜುಂಡ ಪೂಜಾರಿ ಅವರು, ಇಂತಹ ಕ್ರೀಡಾಕೂಟಗಳು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಸದಸ್ಯರ ನಡುವೆ ಸ್ನೇಹ, ಬಾಂಧವ್ಯ ಹಾಗೂ ಸಂಘಟನಾ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಳಿಕ ಶ್ರೀ ನಿತ್ಯಾನಂದ ಶೆಟ್ಟಿ ಹಾಗೂ ಶ್ರೀ ನಂಜುಂಡ ಪೂಜಾರಿ ಅವರಿಂದ ಕೋಟಿ ಚೆನ್ನಯ್ಯ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ನಂತರ ಬ್ಯಾಡ್ಮಿಂಟನ್ ಪಂದ್ಯವನ್ನು ಸಾಂಕೇತಿಕವಾಗಿ ಆರಂಭಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಈ ಕ್ರೀಡಾಕೂಟದಲ್ಲಿ ಸದಸ್ಯರನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ, ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ತಂಡಗಳನ್ನು ರಚಿಸಿ ಪಂದ್ಯಗಳನ್ನು ಆಯೋಜಿಸಲಾಯಿತು.
ತಂಡಗಳಿಗೆ ಶಾಂಭವಿ ಸ್ಟ್ರೈಕರ್ಸ್, ಪಾಲ್ಗುಣಿ ಪವರ್, ನೇತ್ರಾವತಿ ಸ್ಮ್ಯಾಶರ್ಸ್ ಹಾಗೂ ನಂದಿನಿ ನೆಟ್ ವಾರಿಯರ್ಸ್ ಎಂಬ ದಕ್ಷಿಣ ಕನ್ನಡದ ನಾಲ್ಕು ನದಿಗಳ ಹೆಸರುಗಳನ್ನು ನೇಮಕ ಮಾಡಲಾಯಿತು.ತಂಡಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದವು.
ಬೆಳಗ್ಗೆ ಉಪಹಾರ, ಮದ್ಯಾಹ್ನ ಮಂಗಳೂರು ಶೈಲಿಯ ನಾನ್ ವೆಜ್ ಊಟ, ಸಾಯಂಕಾಲ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ ಘಟಕದ ಅಧ್ಯಕ್ಷರು ವಿಜೇತ್ ವಿ ಪೂಜಾರಿ, ಮುಖ್ಯ ಅತಿಥಿಗಳಾದ ಗಣೇಶ್ ಅಮೀನ್, ಜಗನ್ನಾಥ ಪೂಜಾರಿ, ರೋಹಿತ್ ಎಸ್, ಗೌರವ ಸಲಹೆಗಾರರಾದ ಕೆ ಬಿ ಜಯರಾಮ್, ಸುಧೀರ್ ಎಸ್ ಪೂಜಾರಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್ ಕಲ್ಲಾಜೆ ಕಾರ್ಯದರ್ಶಿ ಮನೋಜ್ ಕುಮಾರ್ ಟಿ, ಕ್ರೀಡಾ ನಿರ್ದೇಶಕರಾದ ಕುಮಾರಿ ಅನುಷಾ ಸ್ವಾಗತ ಭಾಷಣ ಮಾಡಿದರು, ಮತ್ತೋರ್ವ ಕ್ರೀಡಾ ನಿರ್ದೇಶಕಾರದ ಚೇತನ್ ಅವರು ಪ್ರಾಸ್ತಾವಿಕ ನುಡಿ ನುಡಿದರು.
ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ರೋಹಿತ್ ಎಸ್ ಮಾತನಾಡಿ ಈ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆದಿದೆ.ಇನ್ನಷ್ಟೂ ನಮ್ಮ ಸದಸ್ಯರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂದು ಹಿತ ನುಡಿದರು. ಘಟಕದ ಅಧ್ಯಕ್ಷರು ಮಾತನಾಡಿ ಕ್ರೀಡಾ ಕೂಟದ ಯಶಸ್ವಿಗೆ ಪ್ರತಿಯೊಬ್ಬ ಸದಸ್ಯರ ಕೊಡುಗೆಯನ್ನು ನೆನಪಿಸಿದರು.
ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳು ಮಾತನಾಡಿ ಘಟಕದ ಸದಸ್ಯರೂ ಕ್ರೀಡಾ ಅಲ್ಲದೆ ಘಟಕದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಆರ್ಥಿಕ ನೆರವು ನೀಡಿದ ದಾನಿಗಳನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ತಂಡದ 4 ನಾಯಕರಿಗೆ ಗೌರವಿಸಲಾಯಿತು.
ಬ್ರಾಹ್ಮಾರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ತೀರ್ಪುಗಾರರಾಗಿ ಬಂದ 4 ಸದಸ್ಯರನ್ನೂ ಸನ್ಮಾನಿಸಲಾಯಿತು.

ದಿನವಿಡೀ ನಡೆದ ಪಂದ್ಯಗಳು ಅತ್ಯಂತ ರೋಚಕವಾಗಿದ್ದು, ಆಟಗಾರರು ಹಾಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ, ಟ್ರೋಫಿ ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಅಭಿನಂದಿಸಿದರು. ಎಲ್ಲಾ ತಂಡಗಳ ನಾಯಕರು, ಆಟಗಾರರು, ಸಂಘಟಕರು ಹಾಗೂ ಸ್ವಯಂಸೇವಕರ ಸೇವೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಅವರು ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಅತಿಥಿಗಳು, ಪ್ರಾಯೋಜಕರು, ಸದಸ್ಯರು, ಪದಾಧಿಕಾರಿಗಳು ಹಾಗೂ ಭಾಗವಹಿಸಿದ ಕ್ರೀಡಾಪಟುಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಾಂಸ್ಕೃತಿಕ ನಿರ್ದೇಶಕರಾದ ಮಧುಶ್ರೀ ಬಂಗೇರ ಕಾರ್ಯಕ್ರಮ ನಿರೂಪಿಸಿದರು.





