ಮಂಗಳೂರು: ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ಬಿಗ್ ಆಪರೇಷನ್ ನಡೆಸಿದ್ದಾರೆ! ದಕ್ಷಿಣ ಮತ್ತು ಸೆಂಟ್ರಲ್ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ರಸ್ತೆಯಲ್ಲೇ ಬಸ್ಗಳನ್ನು ತಡೆದು ದಿಢೀರ್ ಡ್ರಗ್ಸ್ ತಪಾಸಣೆ ನಡೆಸಲಾಗಿದೆ.

ಕೋಣಾಜೆ, ಉಳ್ಳಾಲ, ಕಂಕನಾಡಿ, ಪಾಂಡೇಶ್ವರ ಸೇರಿದಂತೆ ಪ್ರಮುಖ ಠಾಣಾ ವ್ಯಾಪ್ತಿಯಲ್ಲಿ ಈ ಮಿಂಚಿನ ಕಾರ್ಯಾಚರಣೆ ನಡೆದಿದೆ. ಕೋಟೇಕಾರ್ ಮತ್ತು ಕೋಣಾಜೆ ಬಂಟರ ಭವನದ ಬಳಿ ಸಂಜೆ 4:30 ರಿಂದ 6 ಗಂಟೆಯ ನಡುವೆ ಪರೀಕ್ಷೆ ನಡೆಸಲಾಯಿತು.

ಎಸ್ಡಿಎಂ, ನಿಟ್ಟೆ, ಸೈಂಟ್ ಅಲೋಶಿಯಸ್, ಪಿಎ ಕಾಲೇಜು, ಬ್ಯಾರೀಸ್, ಕೆನರಾ ಸೇರಿದಂತೆ ಹಲವು ಪ್ರಮುಖ ಕಾಲೇಜುಗಳ ಒಟ್ಟು 159 ವಿದ್ಯಾರ್ಥಿಗಳನ್ನು ಸ್ಥಳದಲ್ಲೇ ‘ಡ್ರಗ್ ಟೆಸ್ಟಿಂಗ್ ಕಿಟ್’ ಬಳಸಿ ಪರೀಕ್ಷೆಗೆ ಒಳಪಡಿಸಲಾಯಿತು.

ಕೋಟೇಕಾರ್ನಲ್ಲಿ ತಪಾಸಣೆಗೊಳಪಟ್ಟ 72 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯ ವರದಿ ‘ಪಾಸಿಟಿವ್’ ಬಂದಿದ್ದರೆ, ಕೋಣಾಜೆಯಲ್ಲಿ ತಡೆದು ನಿಲ್ಲಿಸಿದ ಪಿಎ ಕಾಲೇಜಿನ ಎರಡು ಬಸ್ಗಳಲ್ಲಿದ್ದ 87 ವಿದ್ಯಾರ್ಥಿಗಳ ವರದಿ ‘ನೆಗೆಟಿವ್’ ಬಂದಿದೆ.

ಈ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ನಿರಂತರ ಕಾರ್ಯಾಚರಣೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಪಾಸಿಟಿವ್ ಬರುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದಿದ್ದಾರೆ.

ಆದರೂ ಮಂಗಳೂರನ್ನು ಸಂಪೂರ್ಣ ಡ್ರಗ್ಸ್ ಮುಕ್ತಗೊಳಿಸಲು ಇನ್ನೂ ಹೆಚ್ಚಿನ ಶ್ರಮ ಅಗತ್ಯವಿದೆ ಎಂದಿರುವ ಅವರು, ಡ್ರಗ್ಸ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ ನಂತರ ಆತನಿಗೆ ಸೂಕ್ತ ಕೌನ್ಸೆಲಿಂಗ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಮಂಗಳೂರು ಪೊಲೀಸರ ಈ ಕಾರ್ಯಾಚರಣೆ ಹೀಗೆಯೇ ಮುಂದುವರಿಯಲಿದೆ.






