ಉಡುಪಿ: ಉಡುಪಿಯ ನಿಟ್ಟೂರು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ, ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಮೃತರನ್ನು ಸಾಗರದ ಜನ್ನತ್ ನಗರ ನಿವಾಸಿ ಬೆಟ್ಟೆ ಗಫಾರ್ ಎಂಬವರ ಮಗ, ಹೂಡೆ ಮೂಲದ ಬೆಟ್ಟೇ ಅಫ್ರಾನ್ ಎಂದು ಗುರುತಿಸಲಾಗಿದೆ.

ಆಗಸ್ಟ್ 16ರಂದು ಉಡುಪಿಯ ನಿಟ್ಟೂರು ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಭೀಕರ ಡಿಕ್ಕಿಯಲ್ಲಿ ಬೈಕ್ ಸವಾರ ಬೆಟ್ಟೇ ಅಫ್ರಾನ್ ತೀವ್ರವಾಗಿ ಗಾಯಗೊಂಡಿದ್ದರು.

ಅಪಘಾತ ಸಂಭವಿಸಿದ ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅಫ್ರಾನ್, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 17ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.






