ಶಿವಮೊಗ್ಗ: ಪೋಷಕರು ಓದುವಂತೆ ಬುದ್ಧಿವಾದ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಬೇಕಾಗಿದ್ದ 14 ವರ್ಷದ ಬಾಲಕಿಯೊಬ್ಬಳು, ಕೊನೆಗೆ ಮನನೊಂದು ದುರಂತ ಅಂತ್ಯ ಕಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೇವಲ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದು, ಹೆತ್ತವರ ಕಣ್ಣೀರು ಮುಗಿಲು ಮುಟ್ಟಿದೆ.

ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಸೃಷ್ಟಿ ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಘಟನೆ ನಡೆದ ದಿನ ತಂದೆ-ತಾಯಿ ಪೂಜೆಗಾಗಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೃಷ್ಟಿ ನೇಣಿಗೆ ಶರಣಾಗಿದ್ದಾಳೆ. ಪೋಷಕರು ಪೂಜೆ ಮುಗಿಸಿ ಮನೆಗೆ ಹಿಂತಿರುಗಿದಾಗ ಈ ದುರಂತ ಬೆಳಕಿಗೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿನಿ ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಲಭ್ಯವಾಗಿದೆ. “ಪೋಷಕರು ಪದೇ ಪದೇ ಓದುವಂತೆ ಒತ್ತಡ ಹೇರುತ್ತಿದ್ದದ್ದೇ ನನ್ನ ಈ ನಿರ್ಧಾರಕ್ಕೆ ಕಾರಣ” ಎಂದು ಸೃಷ್ಟಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







