ಬೆಳ್ತಂಗಡಿ : ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೆ.3ರಂದು ರಾತ್ರಿ ಚಾರ್ಮಾಡಿ ಸಮೀಪದ ಚಿಬಿದ್ರೆ ಎಂಬಲ್ಲಿ ನಡೆದಿದೆ.
ಮೃತರನ್ನು ಚಾರ್ಮಾಡಿ ಗ್ರಾಮದ ಮುಗುಳಿದಡ್ಡ ನಿವಾಸಿ ದಯಾನಂದ ಗೌಡ (45) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ದಯಾನಂದ ಗೌಡ ಅವರು ಉಜಿರೆಯ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಚಿಬಿದ್ರೆ ಸಮೀಪದಲ್ಲಿ ತೆರಳುತ್ತಿದ್ದ ವೇಳೆ ತರಕಾರಿ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ದಯಾನಂದ ಗೌಡ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ದಯಾನಂದ ಗೌಡ ಅವರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ .
ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




