ಬೆಳ್ತಂಗಡಿ: ಉಜಿರೆ – ಬೆಳಾಲು – ಬಂದಾರು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರು ದಿಢೀರನೆ ಕಾಡಾನೆಗೆ ಎದುರಾಗಿ, ಪವಾಡಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಬೆಳಾಲು ಗ್ರಾಮದ ಮಿನಂದೇಲಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ರಾತ್ರಿ ಸುಮಾರು 10:00 ರಿಂದ 10:30ರ ಅವಧಿಯಲ್ಲಿ ಮಿನಂದೇಲು ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ರಸ್ತೆ ಮಧ್ಯೆ ಕಾಡ ಪ್ರತ್ಯಕ್ಷಗೊಂಡಿದ್ದು, ಭೀತಿಗೊಳಗಾದ ಸವಾರ ತಕ್ಷಣವೇ ಸಮಯಪ್ರಜ್ಞೆಯಿಂದ ಬೈಕ್ ನಿಯಂತ್ರಿಸಿ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ. ಘಟನೆಯ ಆಘಾತದಿಂದ ಸವಾರ ಗಲಿಬಿಲಿಗೊಂಡಿದ್ದರಿಂದ ಆನೆಯ ಫೋಟೋ ಅಥವಾ ವೀಡಿಯೋ ಚಿತ್ರೀಕರಿಸಲು ಸಾಧ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಪ್ರಕಾರ, ಆನೆಯು ಮಂಜನೊಟ್ಟಿನಿಂದ ಭಂಡಾರಿ ಮಜಲು ಮಾರ್ಗವಾಗಿ ರಾತ್ರಿ 1:35ರ ಸುಮಾರಿಗೆ ಮುಂಡೆತ್ಯಾರು ದಾಟಿ, ಕೆಳಗಿನ ಬೆಳಾಲಿನ ಕಡೆಗೆ ಸಂಚರಿಸಿದೆ ಎಂದು ತಿಳಿದುಬಂದಿದೆ.





