ತೆಲಂಗಾಣ: ಅದೊಂದು ಕ್ಷಣಿಕ ಕೋಪ… ಸಣ್ಣ ಅಸಮಾಧಾನ… ಆದರೆ ಕೊನೆಗೆ ಉಳಿದಿದ್ದು ಮಾತ್ರ ಜೀವಮಾನದ ಕಣ್ಣೀರು ಮತ್ತು ಅನಾಥವಾದ ಮಗು.

ತೆಲಂಗಾಣದ ಮಹಬೂಬಾಬಾದ್ನಲ್ಲಿ ಮನಕಲಕುವ ದಾರುಣ ಘಟನೆಯೊಂದು ನಡೆದಿದೆ. ಗಂಡ ತನ್ನ ವೀಡಿಯೋ ಕಾಲ್ ಸ್ವೀಕರಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಮನನೊಂದ 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.
ಮೃತರನ್ನು ವಾರಂಗಲ್ ಜಿಲ್ಲೆಯ ಅಖಿಲಾ ಎಂದು ಗುರುತಿಸಲಾಗಿದೆ. 20 ವರ್ಷದ ಅಖಿಲಾಗೆ ಎರಡು ವರ್ಷಗಳ ಹಿಂದೆಯಷ್ಟೇ ಮಹಬೂಬಾಬಾದ್ನ ಹುಸೇನ್ ಎಂಬುವವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಒಂದು ಚಿಕ್ಕ ಮಗುವೂ ಇದೆ.

ಘಟನೆಯ ವಿವರ :
ಸೆಪ್ಟೆಂಬರ್ 2ರಂದು ಅಖಿಲಾ ತಮ್ಮ ತವರು ಮನೆಯಲ್ಲಿದ್ದರು. ಆ ವೇಳೆ ಮಗು ತೀವ್ರವಾಗಿ ಅಳುತ್ತಿದ್ದುದರಿಂದ, ಮಗುವನ್ನು ತೋರಿಸಲು ಪತಿ ಹುಸೇನ್ಗೆ ವೀಡಿಯೋ ಕಾಲ್ ಮಾಡಿದ್ದಾರೆ. ಆದರೆ ಕಾರಣಾಂತರಗಳಿಂದ ಪತಿ ಕರೆ ಸ್ವೀಕರಿಸಿಲ್ಲ.
ಪತಿ ಕಾಲ್ ರಿಸೀವ್ ಮಾಡಲಿಲ್ಲ ಎಂಬ ಸಣ್ಣ ಬೇಸರ ಅಖಿಲಾ ಅವರ ಮನಸ್ಸಿನಲ್ಲಿ ತೀವ್ರ ತಳಮಳ ಸೃಷ್ಟಿಸಿದೆ. ತಕ್ಷಣವೇ ತವರು ಮನೆಯಿಂದ ಮಹಬೂಬಾಬಾದ್ನಲ್ಲಿರುವ ಅತ್ತೆ-ಮಾವನ ಮನೆಗೆ ತೆರಳಿದ ಅಖಿಲಾ, ಅಲ್ಲಿ ಇಲಿ ಪಾಷಾಣ ಸೇವಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೇ ಅಖಿಲಾ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಳುವ ಮಗುವನ್ನು ಸಮಾಧಾನ ಪಡಿಸಲು ಹೋದ ತಾಯಿ, ಇಂದು ಅದೇ ಮಗುವನ್ನು ಸಂಪೂರ್ಣವಾಗಿ ಅನಾಥ ಮಾಡಿ ಹೋಗಿರುವುದು ಸ್ಥಳೀಯರಲ್ಲಿ ತೀವ್ರ ಶೋಕ ತಂದಿಟ್ಟಿದೆ. ಕ್ಷಣಿಕ ಕೋಪ ಮತ್ತು ಆತುರದ ನಿರ್ಧಾರಗಳು ಕುಟುಂಬದ ಭವಿಷ್ಯವನ್ನೇ ಹೇಗೆ ಕತ್ತಲಿಗೆ ತಳ್ಳುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.






