ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಆಯೋಜಿಸುತ್ತಿರುವ ರಾಷ್ಟ್ರಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ‘ಎಸ್ಡಿಎಂ ಆರೋಹಣ – 2026’ ಸೆಪ್ಟೆಂಬರ್ 10 ಮತ್ತು 11 ರಂದು ನಡೆಯಲಿದೆ. ಎರಡು ದಿನಗಳ ಈ ಬೃಹತ್ ಕಾರ್ಯಕ್ರಮವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ. ಸೆಪ್ಟೆಂಬರ್ 10 ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಕ್ಷೇಮವನದ ಮುಖ್ಯಾಡಳಿತಾಧಿಕಾರಿ ಶ್ರದ್ಧಾ ಅಮಿತ್ ಉದ್ಘಾಟಿಸಲಿದ್ದಾರೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ ಸಮಾರಂಭವು ಸೆಪ್ಟೆಂಬರ್ 11 ರ ಸಂಜೆ ನಡೆಯಲಿದ್ದು, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಚಿತ ಪ್ರವೇಶ: ಪದವಿಪೂರ್ವ (PUC) ಹಾಗೂ ಪದವಿ (Degree) ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ವಿವಿಧ ಸ್ಪರ್ಧೆಗಳು: ಕಲೆ, ವಿಜ್ಞಾನ, ವಾಣಿಜ್ಯ ಹಾಗೂ ತಂತ್ರಜ್ಞಾನ ವಿಭಾಗಗಳಲ್ಲಿ ಒಟ್ಟು 23 ವಿಭಿನ್ನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಒಬ್ಬ ವಿದ್ಯಾರ್ಥಿ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
ನಗದು ಬಹುಮಾನ: ಸ್ಪರ್ಧೆಯ ವಿಜೇತರಿಗೆ ಒಟ್ಟು ₹1,50,000 (ಒಂದು ಲಕ್ಷದ ಐವತ್ತು ಸಾವಿರ) ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಸೆಪ್ಟೆಂಬರ್ 10 ರ ಸಂಜೆ ಸಾಂಸ್ಕೃತಿಕ ರಸಸಂಜೆ ನಡೆಯಲಿದೆ:
ಸಂಜೆ 6:00 ಕ್ಕೆ: ಭಾರತದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಿಂದ ಸೆಲೆಬ್ರಿಟಿ ನೈಟ್.
ಸಂಜೆ 7:00 ರಿಂದ: ‘ಟೀಮ್ ಕಂಬೋಜಿ’ ತಂಡದಿಂದ ಭರ್ಜರಿ ಮ್ಯೂಸಿಕ್ ಕಾನ್ಸರ್ಟ್ ನಡೆಯಲಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.




