ವಿಟ್ಲ: ಧರ್ಮಸ್ಥಳದಲ್ಲಿ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ತಾಲೂಕು ಮಟ್ಟದ ಪೂರ್ವಬಾವಿ ಸಭೆಯು ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ದೇವಿದಾಸ್ ಶೆಟ್ಟಿ ಯವರು ಸಭಾದ್ಯಕ್ಷತೆ ವಹಿಸಿದ್ದರು.ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಮಾತನಾಡುತ್ತಾ 28ನೇ ವರ್ಷದ ಭಜನಾ ಕಮ್ಮಟದ ಮಾಹಿತಿ ನೀಡಿದರು.

ಸಾಮೂಹಿಕವಾಗಿ ಭಜನೆ ಹಾಡುವಾಗ ಎಲ್ಲರ ಸ್ವರ ಮತ್ತು ಲಯ ಒಂದೇ ಆಗಿರುತ್ತದೆ. ಈ ಧ್ವನಿಯ ಏಕತೆಯು ಜನರ ಮನಸ್ಸುಗಳನ್ನು ಒಂದಾಗಿಸುತ್ತದೆ ಮತ್ತು ಆಂತರಿಕವಾಗಿ ಪ್ರೀತಿ, ವಿಶ್ವಾಸವನ್ನು ಹೆಚ್ಚಿಸುತ್ತದೆ. ಭಜನಾ ಮಂಡಳಿಯ ಸದಸ್ಯರು ಒಂದು ಕುಟುಂಬದಂತೆ ಇರುತ್ತಾರೆ.
ಮಂಡಳಿಯ ಯಾವುದೇ ಒಬ್ಬ ಸದಸ್ಯನಿಗೆ ಕಷ್ಟ ಬಂದಾಗ ಅಥವಾ ಮನೆಯಲ್ಲಿ ಶುಭ ಕಾರ್ಯಗಳಿದ್ದಾಗ ಇಡೀ ತಂಡ ಜೊತೆಯಾಗಿ ನಿಂತು ಸಹಾಯ ಮಾಡುತ್ತದೆ. ಇದು ಭದ್ರತೆಯ ಭಾವನೆಯನ್ನು ನೀಡುತ್ತದೆ.ಧರ್ಮಸ್ಥಳ ಕಮ್ಮಟದ ಮೂಲಕ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮಮಟ್ಟದಿಂದ ಸಂಘಟನಾ ಶಕ್ತಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದರು.

ತಾಲೂಕು ಯೋಜನಾಧಿಕಾರಿಗಳಾದ ಸುರೇಶ್ ಗೌಡರವರು ಭಜನಾ ಮಂಡಳಿಯಲ್ಲಿ ಎಲ್ಲ ವರ್ಗದ, ಎಲ್ಲ ಜಾತಿಯ ಜನರು ಒಟ್ಟಾಗಿ ಕುಳಿತು ಹಾಡುತ್ತಾರೆ. ಇಲ್ಲಿ ಮೇಲು-ಕೀಳು ಎಂಬ ಭಾವನೆ ಇರುವುದಿಲ್ಲ. ಎಲ್ಲರೂ ಭಗವಂತನ ಎದುರು ಸಮಾನರು ಎಂಬ ಮನೋಭಾವನೆ ಮೂಡುವುದರಿಂದ ಸಾಮಾಜಿಕ ಒಗ್ಗಟ್ಟು ಹೆಚ್ಚುತ್ತದೆ. ವಲಯ ಮಟ್ಟದಿಂದ ಅನುಷ್ಠಾನ ಮಾಡಬೇಕು ಎಂದರು. ತಾಲೂಕು ಕಾರ್ಯದರ್ಶಿ ರಮೇಶ್ ಸಾಲೆತ್ತೂರು,ಕೋಶಾಧಿಕಾರಿ ಜಯರಾಮ್ ರೈ ಕಲ್ಲಡ್ಕ, ಶಾಲಿನಿ, ಉಪಸ್ಥಿತರಿದ್ದರು.





