ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತ್ಯಂತ ಅಪರೂಪದ ಹಾಗೂ ಭೀಕರ ದೃಶ್ಯವೊಂದು ವರದಿಯಾಗಿದೆ! ಪ್ರಕೃತಿಯ ನಿಯಮವೇ ಹಾಗೆ, ಬಲಶಾಲಿಯೇ ಇಲ್ಲಿ ಜಯಶಾಲಿ.

ಆದರೆ ಹಾವಿನ ಲೋಕದ ರಾಜ ಎಂದೇ ಕರೆಯಲ್ಪಡುವ ಕಾಳಿಂಗ ಸರ್ಪವೊಂದು ತನ್ನಷ್ಟೇ ದೊಡ್ಡದಾದ ಹೆಬ್ಬಾವನ್ನು ನುಂಗಿ, ಆ ಬಳಿಕ ಅದನ್ನು ಹೊರಹಾಕಿದ ರೋಚಕ ಘಟನೆ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ.
ಘಟನೆ ನಡೆದದ್ದು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ನಿವಾಸಿ ಹಿತೇಶ್ ಅವರ ತೋಟದಲ್ಲಿ. ಸೆಪ್ಟೆಂಬರ್ 11ರ ಸಂಜೆ ಹಿತೇಶ್ ಅವರ ಮನೆಯ ತೋಟದಲ್ಲಿ ಬೃಹತ್ ಆಕಾರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು.

ತೋಟಕ್ಕೆ ಲಗ್ಗೆಯಿಟ್ಟಿದ್ದ ಕಾಳಿಂಗ ಸರ್ಪ ಸಾಮಾನ್ಯ ಸ್ಥಿತಿಯಲ್ಲಿರಲಿಲ್ಲ! ಅದು ಈಗಾಗಲೇ ಬೃಹತ್ ಹೆಬ್ಬಾವೊಂದನ್ನು ಸಂಪೂರ್ಣವಾಗಿ ನುಂಗಿಹಾಕಿತ್ತು. ಆಹಾರವನ್ನು ಕಬಳಿಸಿದ ಬಳಿಕ ಭಾರ ತಡೆಯಲಾಗದೆ ಹಾವು ಅಲ್ಲೇ ನಿಶ್ಚಲವಾಗಿ ಬಿದ್ದಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಹಿತೇಶ್ ಹಾಗೂ ಕುಟುಂಬಸ್ಥರು ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಂಡ ಕಾಳಿಂಗ ಸರ್ಪದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಕಾರ್ಯಾಚರಣೆಯ ವೇಳೆ ಅಪಾಯವನ್ನು ಅರಿತ ಕಾಳಿಂಗ ಸರ್ಪ, ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ವೇಗವಾಗಿ ತಪ್ಪಿಸಿಕೊಳ್ಳಲು ತನ್ನ ಹೊಟ್ಟೆಯಲ್ಲಿದ್ದ ಹೆಬ್ಬಾವನ್ನು ಸಂಪೂರ್ಣವಾಗಿ ಹೊರಹಾಕಿದೆ (ವಾಂತಿ ಮಾಡಿದೆ). ಕಾಳಿಂಗ ಸರ್ಪದ ಬಾಯಿಂದ ಹೆಬ್ಬಾವು ಹೊರಬರುವ ಅಪರೂಪದ ದೃಶ್ಯವನ್ನು ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.
ಕೊನೆಗೂ ಉರಗ ರಕ್ಷಕರು ಕಾಳಿಂಗ ಸರ್ಪಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿದು, ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ದಟ್ಟ ಅರಣ್ಯಕ್ಕೆ ಬಿಡಲಾಗಿದೆ.






