ಬೆಳ್ತಂಗಡಿ: ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಈಜಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಬೆಳ್ತಂಗಡಿಯ 14 ವರ್ಷದ ಶಾಲಾ ವಿದ್ಯಾರ್ಥಿ ಶ್ರೇಯಸ್ ಮೃತದೇಹ ಕೊನೆಗೂ ಪತ್ತೆಯಾಗಿದೆ. ಅಕ್ಟೋಬರ್ 4ರಂದು ಕಾಣೆಯಾಗಿದ್ದ ಬಾಲಕನ ಶವ ಇಂದು ಸಂಜೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ಪತ್ತೆಯಾಗಿದೆ.

ಹುಲಿವೇಷ ತರಬೇತಿಗೆ ಬಂದಿದ್ದ ಬಾಲಕ:
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿ ಸೇಷಪ್ಪ ಅವರ ಪುತ್ರ, ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಎಸ್. ಕುಂಬಾರ (14 ವರ್ಷ) ಅಕ್ಟೋಬರ್ 4ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತದ ತರಬೇತಿಗಾಗಿ ತನ್ನ ನಾಲ್ವರು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ.

ಸಮುದ್ರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿಹೋದ ಶ್ರೇಯಸ್:
ತರಬೇತಿ ಮುಗಿದ ಬಳಿಕ ಶ್ರೇಯಸ್ ಮತ್ತು ಸ್ನೇಹಿತರು ಸ್ಟೇಟ್ ಬ್ಯಾಂಕ್ನಿಂದ ಪಣಂಬೂರು ಬೀಚ್ಗೆ ತೆರಳಿದ್ದರು. ಸಂಜೆ ಸುಮಾರು 4:30ರಿಂದ 5:00 ಗಂಟೆಯ ಅವಧಿಯಲ್ಲಿ ಕೂರಿಕಟ್ಟ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದಾಗ, ಸಂಜೆ 6:00 ಗಂಟೆಯ ಸುಮಾರಿಗೆ ಸಮುದ್ರದ ಬಲವಾದ ಅಲೆಗೆ ಸಿಲುಕಿದ ಶ್ರೇಯಸ್ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ.
ಭಯದಿಂದ ವಿಷಯ ಮುಚ್ಚಿಟ್ಟಿದ್ದ ಸ್ನೇಹಿತರು:
ಘಟನೆಯಿಂದ ತೀವ್ರ ಭಯಭೀತರಾದ ಆತನ ಅಪ್ರಾಪ್ತ ಸ್ನೇಹಿತರು ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಅಕ್ಟೋಬರ್ 5ರಂದು ಬೆಳಿಗ್ಗೆಯಷ್ಟೇ ಶ್ರೇಯಸ್ನ ಕುಟುಂಬಸ್ಥರಿಗೆ ವಿಷಯ ತಲುಪಿಸಲಾಗಿತ್ತು. ತಕ್ಷಣವೇ ಬಾಲಕನ ತಂದೆ ಸೇಷಪ್ಪ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ (ಅ.ಕ್ರ. 127/2026) ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು.

ಬೃಹತ್ ಶೋಧ ಕಾರ್ಯಾಚರಣೆ ಹಾಗೂ ಮೃತದೇಹ ಪತ್ತೆ:
ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ, ಲೈಫ್ ಗಾರ್ಡ್ ಹಾಗೂ ಸ್ಥಳೀಯ ಮುಳುಗು ತಜ್ಞರು ಮತ್ತು ಮೀನುಗಾರರ ಸಹಾಯದಿಂದ ಸತತ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯ ಫಲವಾಗಿ ಇಂದು (ಅಕ್ಟೋಬರ್ 6) ಸಂಜೆ ಉಡುಪಿ ಜಿಲ್ಲೆಯ ಹೆಜಮಾಡಿ ಕರಾವಳಿ ತೀರದಲ್ಲಿ ಶ್ರೇಯಸ್ನ ಮೃತದೇಹ ಪತ್ತೆಯಾಗಿದೆ.





