ಮೂಡಬಿದಿರೆ: ಮೂಡಬಿದಿರೆಯಲ್ಲಿ ಅತ್ಯಂತ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿ, ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ನಿವಾಸಿಗಳಾದ ಮರ್ಸಿ ಮಸ್ಕರೇನಸ್ (45) ಹಾಗೂ ಅವರ 18 ವರ್ಷದ ಪುತ್ರ ಶೋನ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಶೋನ್ ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದನು.

ಗುರುವಾರ ಬೆಳಿಗ್ಗೆ ಸುಮಾರು 7 ರಿಂದ 8 ಗಂಟೆಯ ವೇಳೆಗೆ ಶೋನ್ ಮಸ್ಕರೇನಸ್ ಮನೆಯಲ್ಲಿ ಬಟ್ಟೆ ಒಣಗಿಸಲು ಹೋದಾಗ ಈ ಅಪಘಾತ ಸಂಭವಿಸಿದೆ. ಬಟ್ಟೆ ಹಾಕುವ ಕಬ್ಬಿಣದ ತಂತಿಗೆ ಹೈಟೆನ್ಸನ್ ವಿದ್ಯುತ್ ತಂತಿ ಸ್ಪರ್ಶಿಸಿ, ವಿದ್ಯುತ್ ಪ್ರವಹಿಸಿತ್ತು ಎನ್ನಲಾಗಿದೆ.
ಬಟ್ಟೆ ಒಣಗಾಕುವಾಗ ಮಗ ಶೋನ್ ವಿದ್ಯುತ್ ಆಘಾತಕ್ಕೆ ಒಳಗಾಗುವುದನ್ನು ಕಂಡ ತಾಯಿ ಮರ್ಸಿ, ಆತನನ್ನು ರಕ್ಷಿಸಲು ಓಡಿಬಂದಿದ್ದಾರೆ. ಆದರೆ ದುರ್ದೈವವಶಾತ್ ತಾಯಿಗೂ ಸಹ ತೀವ್ರವಾಗಿ ವಿದ್ಯುತ್ ಪ್ರವಹಿಸಿ, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಮನೆ ಬಳಿ ಬಂದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.





