ಚಿಕ್ಕಮಗಳೂರು: ಇತಿಹಾಸ ಪ್ರಸಿದ್ದ ದೇವಿರಮ್ಮ ಬೆಟ್ಟಕ್ಕೆ ದೀಪಾವಳಿ ಸಂದರ್ಭದಲ್ಲಿ ಸಾವಿರಾರು ಮಂದಿ ಭೇಟಿ ನೀಡಿದ್ದು, ಇದೇ ವೇಳೆ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಒಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಇದೇ ವೇಳೆ ಮತ್ತೊಬ್ಬರು ಕಾಲು ಜಾರಿ ಬಿದ್ದು ಅಸ್ವಸ್ಥರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾಡಿ ನಿವಾಸಿ ಲಕ್ಷ್ಮಣ್ (35 ವ) ಎಂಬವರು ಮೃತಪಟ್ಟಿದ್ದಾರೆ. ಮಲ್ಲೇನಹಳ್ಳಿ ಕಡೆಯಿಂದ ಇರುವ ಮಾರ್ಗದಲ್ಲಿ ಬೆಟ್ಟ ಹತ್ತುತ್ತಿರುವಾಗ ಏಕಾಏಕಿ ಕುಸಿದು ಬಿದ್ದ ಲಕ್ಷ್ಮಣ್ ಮೃತಪಟ್ಟಿದ್ದಾರೆ.

ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆಳಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಂಗಳೂರಿನಲ್ಲಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಹೂವಿನಹಳ್ಳಿಯಲ್ಲಿನ ತಮ್ಮ ಭಾವನ ಮನೆಗೆ ಬಂದಿದ್ದರು.

ರಾತ್ರಿ ಪ್ರಯಾಣ ಮಾಡಿ ಬಂದಿದ್ದು, ಬೆಳಗಿನ ಜಾವ ಬೆಟ್ಟ ಹತ್ತಲು ಭಾವನೊಂದಿಗೆ ಹೋಗಿದ್ದರು. ಗುಡ್ಡದಲ್ಲಿ ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಂಜು ಮುಸುಕಿತ್ತು. ಇದರ ನಡುವೆ ಬೆಟ್ಟ ಹತ್ತುವಾಗ ಲಕ್ಷ್ಮಣ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.





