ಉಜಿರೆ: “ಸಾಂಪ್ರದಾಯಿಕ ಆಚರಣೆಗಳ ಅರಿವು ವಿದ್ಯಾರ್ಥಿಗಳಿಗೆ ಬಹುಮುಖ್ಯ. ದೀಪಾವಳಿ ಕುಟುಂಬದ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಹಬ್ಬವಾಗಿದೆ. ಹಬ್ಬಗಳ ಆಚರಣೆಯ ವೈಜ್ಞಾನಿಕ ಹಿನ್ನೆಲೆಯನ್ನು ಅರಿತು ಆಚರಿಸುವುದು ಅತ್ಯಂತ ಅಗತ್ಯ” ಎಂದು ಉಜಿರೆ ಎಸ್.ಡಿ.ಎಂ. ವಸತಿ ಸಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕವಿತಾ ಉಮೇಶ್ ಹೇಳಿದರು.

ಇವರು ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ದೀಪಾವಳಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಾದ ನರಕ ಚತುರ್ದಶಿ, ಗೋ ಪೂಜೆ, ಬಲಿಯೇಂದ್ರ ಪೂಜೆ, ಲಕ್ಷ್ಮೀ ಪೂಜೆ ಹಾಗೂ ತುಳಸಿ ಪೂಜೆಗಳನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಪ್ರತಿಯೊಂದು ಆಚರಣೆಯ ಹಿಂದಿರುವ ಪೌರಾಣಿಕ ಹಿನ್ನೆಲೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಲ್ಲಿ ಪಾಲ್ಗೊಂಡರು. ಗುಂಪು ಗಾಯನ ಹಾಗೂ ಆಕರ್ಷಕ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ನೀಡಿದವು. ಹಬ್ಬದ ಸಂಭ್ರಮದೊಂದಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯುವ ಸುಂದರ ಅವಕಾಶವಾಗಿ ಕಾರ್ಯಕ್ರಮ ಮೂಡಿಬಂದಿತು.
ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿನಿ ಫಾತಿಮಾ ಶಸ್ಮಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅನರ್ಘ್ಯ ಸ್ವಾಗತಿಸಿ, ವಿದ್ಯಾರ್ಥಿನಿ ಧೃತಿ ವಂದಿಸಿದರು.





