ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ, ಯುವತಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಆರೋಪಿಗೆ ಮಂಗಳೂರು ನ್ಯಾಯಾಲಯ ಇದೀಗ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬೆಳ್ತಂಗಡಿ ಮೂಲದ ಬ್ಯೂಟಿಷಿಯನ್ ಒಬ್ಬರಿಗೆ ಮೋಸ ಮಾಡಿದ ಆರೋಪದಡಿ ಪೆರ್ನೆಯ ಸುಶಾಂತ್ ಪೂಜಾರಿ ಬಂಧಿತನಾಗಿದ್ದ. ಏನಿದು ಪೂರ್ತಿ ಪ್ರಕರಣ? ನೋಡಿ ಈ ವರದಿ.

ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ 20 ವರ್ಷದ ಯುವತಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಆರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪೆರ್ನೆಯ ಸುಶಾಂತ್ ಪೂಜಾರಿ ಎಂಬಾತನ ಪರಿಚಯವಾಗಿತ್ತು. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಭರವಸೆ ನೀಡಿದ್ದ ಸುಶಾಂತ್, ಯುವತಿಯನ್ನು ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದ. ಆತನ ಮಾತು ನಂಬಿದ ಯುವತಿ ಸ್ನಾನ ಮಾಡುವ ವೇಳೆ ವಿಡಿಯೋ ಕಾಲ್ ಮಾಡಿದ್ದರು.

ಆದರೆ, ಯುವತಿಯ ನಂಬಿಕೆಗೆ ದ್ರೋಹ ಬಗೆದ ಸುಶಾಂತ್ ಪೂಜಾರಿ ಮತ್ತು ಆತನ ಸಹೋದರಿ ಸೇರಿ ಆ ಖಾಸಗಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಇತರರಿಗೆ ಹಂಚಿದ್ದರು. ಕಳೆದ ಮಾರ್ಚ್ 16ರಂದು ಈ ವಿಷಯ ಯುವತಿಗೆ ತಿಳಿಯುತ್ತಿದ್ದಂತೆ, ಅವರು ಕುಟುಂಬಸ್ಥರೊಂದಿಗೆ ಚರ್ಚಿಸಿ ಮಾರ್ಚ್ 24ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಇದೀಗ ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸುಶಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆರೋಪಿ ಪರವಾಗಿ ವಕೀಲರಾದ ಪ್ರಸಾದ್ ಕುಮಾರ್ ರೈ, ಕೃಷ್ಣದೇವ ಮತ್ತು ಶ್ರೀಹರಿ ಅವರು ವಾದ ಮಂಡಿಸಿದ್ದರು.





