ವೇಣೂರು: ವೇಣೂರು ಆಧ್ಯಾತ್ಮಿಕ ಸಾಧನೆಯೇ ನಮ್ಮ ಹಿಂದೂ ಧರ್ಮದ ಮೂಲವಾಗಿದೆ. ಇಂದು ಹಿಂದೂಗಳಿಗೆ ಧರ್ಮ ಶಿಕ್ಷಣ ಲಭಿಸದ ಕಾರಣ ಸಮಾಜವು ಅದೋಗತಿಯತ್ತ ಸಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂವು ಧರ್ಮ ಶಿಕ್ಷಣ ಪಡೆದು ಧರ್ಮದ ಆಚರಣೆ ಮಾಡುವ ಮೂಲಕ ಆಧ್ಯಾತ್ಮಿಕ ಬಲ ಹೆಚ್ಚಿಸಿಕೊಂಡು ನಮ್ಮ ಜೀವನವನ್ನು ಹಾಗೂ ನಮ್ಮ ದೇಶವನ್ನು ಸಾತ್ವಿಕ ರಾಮರಾಜ್ಯ ಮಾಡಲು ನಾವೆಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕಾಗಿದೆ.ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರು ಕರೆ ನೀಡಿದರು.

ದಿನಾಂಕ 05 ಏಪ್ರಿಲ್ 2026 ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀ ಭರತೇಶ ಸಭಾಭವನ, ಮಹಾವೀರ ನಗರ, ವೇಣೂರು. ನಲ್ಲಿ ಆಯೋಜಿಸಿದ್ದ ‘ಹಿಂದೂ ರಾಷ್ಟ್ರ ವ್ಯಾಖ್ಯಾನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ ಡಾ. ಪ್ರಣವ್ ಮಲ್ಯ ರವರು ಉಪಸ್ಥಿತರಿದ್ದರು.
ಪೂಜ್ಯ ರಮಾನಂದ ಗೌಡರವರು ಮಾತನ್ನು ಮುಂದುವರಿಸುತ್ತಾ, ಧರ್ಮವೇ ನಮ್ಮ ದೇಶದ ಮೂಲವಾಗಿದೆ. ಒಬ್ಬ ಕುರುಡ ಇನ್ನೋರ್ವ ಕುರುಡನಿಗೆ ದಾರಿ ತೋರಿಸಲು ಸಾಧ್ಯವಿಲ್ಲ ಅಂದರೆ ಧರ್ಮದ ಆಚರಣೆ ಹಾಗೂ ಆಧ್ಯಾತ್ಮಿಕ ಸಾಧನೆ ಮಾಡದಿದ್ದರೆ ಸಮಾಜವನ್ನು ಸಾತ್ವಿಕ ಮಾಡಲು ಸಾಧ್ಯವಿಲ್ಲ. ‘ಯಥಾ ರಾಜ ತಥಾ ಪ್ರಜಾ ‘ಎಂಬಂತೆ ರಾಮ ರಾಜ್ಯದಲ್ಲಿ ಕೇವಲ ಶ್ರೀ ರಾಮ ಮಾತ್ರ ಸಾತ್ವಿಕನಾಗಿರಲಿಲ್ಲ. ಪ್ರತಿಯೊಬ್ಬ ಪ್ರಜೆಗಳು ಸಹ ಸಾತ್ವಿಕರಾಗಿದ್ದರು.

ಆಸ್ತಿ, ಅಂತಸ್ತು,ಪದವಿ ಇವುಗಳಿಂದ ನಾವು ಏನನ್ನು ಮಾಡಲು ಸಾಧ್ಯವಿಲ್ಲ. ಕೇವಲ ಆಧ್ಯಾತ್ಮಿಕ ಸಾಧನೆಯಿಂದಲೇ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ. ಧರ್ಮದ ಆಚರಣೆ ಮಾಡುತ್ತ ,ಅಚಲವಾಗಿ ಭಗವಂತನ ಬಗ್ಗೆ ಶ್ರದ್ಧೆ ಇರುವ ಪಾಂಡವರಂತವರನ್ನು ಒಟ್ಟು ಸೇರಿಸಿ ಸಾತ್ವಿಕ ರಾಷ್ಟ್ರ ನಿರ್ಮಾಣ ಕಾರ್ಯವೇ ನಮ್ಮದು. ಆದುದರಿಂದ ನಾವೆಲ್ಲರೂ ಧರ್ಮದ ಆಚರಣೆ ಹಾಗೂ ಆಧ್ಯಾತ್ಮಿಕ ಸಾಧನೆ ಮಾಡಿ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಕೈಜೋಡಿಸುವ ಎಂದು ಧರ್ಮ ಬಾಂಧವರಿಗೆ ಮಾರ್ಗದರ್ಶನವನ್ನು ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರಣವ್ ಮಲ್ಯರವರು, ದೇಶದಲ್ಲಿ ಮತಾಂತರ, ಲವ್ ಜಿಹಾದ್, ವಕ್ಪ್ ಕಾಯ್ದೆ ಮತ್ತು ಭ್ರಷ್ಟಾಚಾರದಂತಹ ಅಹಿತಕರ ಘಟನೆಗಳು ಹೆಚ್ಚುತ್ತಿರುವುದಕ್ಕೆ ಹೊಸ ಪೀಳಿಗೆಯಲ್ಲಿ ಧರ್ಮದ ಜ್ಞಾನವಿಲ್ಲದಿರುವುದೇ ಕಾರಣವೆಂದು ತಿಳಿಸಿದರು. ಈ ಕೊರತೆಯನ್ನು ನೀಗಿಸಲು ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರುಷಗಳಿಂದ ಉಚಿತವಾಗಿ ಧರ್ಮ ಶಿಕ್ಷಣ ವರ್ಗಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ವೇಣೂರಿನ ಕೆಲವು ಕಡೆಗಳಲ್ಲಿ ಧರ್ಮಶಿಕ್ಷಣ ವರ್ಗಗಳು ನಡೆಯುತ್ತಿದ್ದು ತಾವುಗಳು ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.





