ಉಜಿರೆ: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ–2ರ ಫಲಿತಾಂಶದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ಅವರು 625 ಅಂಕಗಳಿಗೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಅಪೂರ್ವ ಸಾಧನೆ ಮೆರೆದಿದ್ದಾರೆ.



ವಿದ್ಯಾರ್ಥಿನಿಯ ಈ ಅತ್ಯುನ್ನತ ಸಾಧನೆಯು ಶಾಲೆಗೆ, ಉಜಿರೆ ಪ್ರದೇಶಕ್ಕೆ ಹಾಗೂ ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ಗರಿ ಮೂಡಿಸಿದೆ. ಉಜಿರೆಯ ಸುರ್ಯ ನಿವಾಸಿಗಳಾದ ಶ್ರೀ ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ಶಾರದಾ ದಂಪತಿಗಳ ಪುತ್ರಿಯಾಗಿರುವ ಅನನ್ಯ, ತಮ್ಮ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ, ಪ್ರತಿಭೆ ಹಾಗೂ ಶಿಕ್ಷಕರ ಸಮರ್ಪಕ ಮಾರ್ಗದರ್ಶನದ ಮೂಲಕ ಈ ಅಮೋಘ ಸಾಧನೆಯನ್ನು ದಾಖಲಿಸಿದ್ದಾರೆ.
ಅನನ್ಯ ಅವರ ಅಣ್ಣ ಕೌಸ್ತುಬ್ ಕೂಡ ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ವೃಂದ, ಆಡಳಿತ ಮಂಡಳಿಯ ಸದಸ್ಯರು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅನನ್ಯ ಅವರ ಮುಂದಿನ ವಿದ್ಯಾಭ್ಯಾಸವು ಇನ್ನಷ್ಟು ಯಶಸ್ವಿಯಾಗಿ ಸಾಗಲಿ ಹಾಗೂ ಭವಿಷ್ಯದಲ್ಲಿ ಇನ್ನೂ ಉನ್ನತ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.




