ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ಈ ವರ್ಷದ 46ನೇ ಬೃಹತ್ ಬೇಸಿಗೆ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದೊಂದಿಗೆ ಕಳಸ ತಾಲೂಕಿನ ನಗರ ಹಾಗೂ ಹಳ್ಳಿಗಳ ಒಟ್ಟು 50 ಕೇಂದ್ರಗಳಲ್ಲಿ ಏ.16ರಿಂದ ಏ.22ರವರೆಗೆ ಈ ಯೋಗ ಯಜ್ಞವು ಜರುಗಲಿದೆ. ಈ ಬೃಹತ್ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಏ.16ರಂದು ಬೆಳಿಗ್ಗೆ 11ಕ್ಕೆ ಕಳಸದ ಶ್ರೀ ಕಲ್ಯಾಣ ಕಳಸೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಹೊರನಾಡಿನ ರಾಜಲಕ್ಷ್ಮೀ ಬಿ. ಜೋಷಿಯವರು ನೆರವೇರಿಸಲಿದ್ದಾರೆ. ಶ್ರೀ ಕಲ್ಯಾಣ ಕಳಸೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಮ್. ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಪಂಚಮುಖಿ ಶಿಬಿರ:
ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಹಾಗೂ ಅಧ್ಯಾತ್ಮಿಕ ವಿಕಸನಗಳ ಸಮಗ್ರ ಸಮನ್ವಯವಾಗಿದೆ. ಈ ಐದು ಆಯಾಮಗಳ ಸಮತೋಲನ ಬೆಳವಣಿಗೆಯ ಮೂಲಕ ವಿದ್ಯಾರ್ಥಿಗಳು ಸಂಪೂರ್ಣ, ಶಿಸ್ತಿನ ಮತ್ತು ಮೌಲ್ಯಾಧಾರಿತ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇಂದಿನ ಯುವ ಪೀಳಿಗೆಯ ಬೆಳವಣಿಗೆಗಾಗಿ ‘ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರ’ ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಅನುಭವಿ ಯೋಗ ಶಿಕ್ಷಕರಿಂದ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ನೀಡಲಾಗುವುದು. ಕಳಸ ತಾಲೂಕಿನ 50 ಕೇಂದ್ರಗಳಲ್ಲಿ ಏಕಕಾಲಕ್ಕೆ ತರಬೇತಿ ನಡೆಯಲಿದೆ. ಶಿಬಿರದಲ್ಲಿ 2000 ಜನ ಭಾಗವಸಲಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ನ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





