ಮಂಗಳೂರು : ಆನ್ಲೈನ್ ಮೂಲಕ ನಿಯಂತ್ರಣವಿಲ್ಲದೆ ಔಷಧ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಇಂದು ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇದರ ಬಿಸಿ ಈಗ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೂ ತಟ್ಟಿದೆ. ಹೌದು, ಆನ್ಲೈನ್ ಮೆಡಿಸಿನ್ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಆಗ್ರಹಿಸಿ ಇಂದು ಜಿಲ್ಲಾದ್ಯಂತ ಮೆಡಿಕಲ್ ಸ್ಟೋರ್ಗಳನ್ನು ಬಂದ್ ಮಾಡಿ ಔಷಧ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದಾರೆ. ಅಷ್ಟಕ್ಕೂ ಈ ಬಂದ್ಗೆ ಪ್ರಮುಖ ಕಾರಣಗಳೇನು? ಮಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ?
‘ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್’ (AIOCD) ದೇಶವ್ಯಾಪಿ ಕರೆ ನೀಡಿರುವ 24 ಗಂಟೆಗಳ ಔಷಧ ಮಳಿಗೆ ಬಂದ್ಗೆ, ‘ಕರ್ನಾಟಕ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್’ ಸಂಪೂರ್ಣ ಬೆಂಬಲ ಘೋಷಿಸಿದೆ. ಇದರ ಭಾಗವಾಗಿ ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಮುಖ ಮೆಡಿಕಲ್ ಸ್ಟೋರ್ಗಳಾದ ಗಣೇಶ್ ಮೆಡಿಕಲ್ಸ್ ಹಾಗೂ ರಾಧಾ ಮೆಡಿಕಲ್ಸ್ ಸೇರಿದಂತೆ ಬಹುತೇಕ ಎಲ್ಲಾ ಫಾರ್ಮಸಿಗಳು ಇಂದು ಬೆಳಗ್ಗಿನಿಂದಲೇ ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಕೈಜೋಡಿಸಿವೆ.
ಔಷಧ ವ್ಯಾಪಾರಿಗಳ ಪ್ರಮುಖ ಆಗ್ರಹವೆಂದರೆ ಜಿಎಸ್ಆರ್ 817 ಮತ್ತು 220 (GSR 817 & 220) ಆದೇಶಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎನ್ನುವುದು. ಇನ್ನು ಆನ್ಲೈನ್ ಫಾರ್ಮಸಿಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಕಂಟಕ ಎದುರಾಗಿದೆ ಎಂದು ವ್ಯಾಪಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ನಕಲಿ ಪ್ರಿಸ್ಕ್ರಿಪ್ಷನ್ಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ಅದಕ್ಕಿಂತಲೂ ಭಯಾನಕ ಸಂಗತಿ ಎಂದರೆ, ಕೃತಕ ಬುದ್ಧಿಮತ್ತೆ ಅಂದರೆ AI ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ವೈದ್ಯರ ಚೀಟಿಗಳನ್ನು ಸೃಷ್ಟಿಸಿ, ಅದರ ಮೂಲಕ ಆನ್ಲೈನ್ನಲ್ಲಿ ಮನಬಂದಂತೆ ಔಷಧಗಳನ್ನು ಆರ್ಡರ್ ಮಾಡಲಾಗುತ್ತಿದೆ.
ಇದು ಕೇವಲ ವ್ಯಾಪಾರದ ನಷ್ಟದ ಪ್ರಶ್ನೆಯಲ್ಲ, ಬದಲಿಗೆ ನಾರ್ಕೋಟಿಕ್ (ಮಾದಕ) ಔಷಧಗಳ ದುರುಪಯೋಗ ಹೆಚ್ಚಾಗಲು ಕಾರಣವಾಗುತ್ತಿದೆ. ನಿಯಂತ್ರಣವಿಲ್ಲದ ಇಂತಹ ಆನ್ಲೈನ್ ದಂಧೆ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂದು ಔಷಧ ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ಸದ್ಯಕ್ಕೆ ಆನ್ಲೈನ್ ಔಷಧ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೆ ತರಬೇಕು ಎನ್ನುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಮಾರಕ ನಿಯಮಗಳಿಗೆ ಬ್ರೇಕ್ ಹಾಕದಿದ್ದರೆ, ಮುಂಬರುವ ದಿನಗಳಲ್ಲಿ ಇಡೀ ದೇಶಾದ್ಯಂತ ಇನ್ನಷ್ಟು ಉಗ್ರವಾದ ಹೋರಾಟ ಮಾಡುವುದಾಗಿ ಔಷಧ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.




