ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರಗಳ ಫಲಾನುಭವಿಗಳಿಗಾಗಿ ಬೃಹತ್ ಕಾರ್ಯಕ್ರಮ ನಡೆಸಲಾಯಿತು.


ಮದ್ಯ ಮುಕ್ತರಾಗಿ ಸಂತೃಪ್ತ ಜೀವನ ನಡೆಸುತ್ತಿರುವ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಕಾರ್ಯಕ್ರಮವು ಜೂನ್ 12ರ ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸನ್ಮಾರ್ಗಕ್ಕೆ ಮರಳಿದ ನೂರಾರು ನವಜೀವನ ಸಮಿತಿಯ ಸದಸ್ಯರು ಈ ಅಪೂರ್ವ ಮಿಲನದಲ್ಲಿ ಪಾಲ್ಗೊಂಡಿದ್ದರು.
ಪೂಜ್ಯ ಹೆಗ್ಗಡೆಯವರ ಅಧ್ಯಕ್ಷತೆ, ಶ್ರೀಗಳ ಆಶೀರ್ವಚನ:
ಈ ಮಹತ್ವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿ , ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕೊಡಗಿನ ವಿರಾಜಪೇಟೆಯ ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ನಿ.ಪ್ರ.ಸ್ವ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮಸ್ಥಳದ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.

ಮದ್ಯಪಾನ ತ್ಯಜಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕುತ್ತಿರುವ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ‘ನವಜೀವನ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರದ ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪಸಿಂಹ ನಾಯಕ್ ಅವರು ಪ್ರದಾನ ಮಾಡಿದರು. ಹಾಗೆಯೇ, ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶ್ರದ್ಧಾ ಅಮಿತ್ ಅವರು ‘ನವಜೀವನ ಕಿರುಚಿತ್ರ’ವನ್ನು ಹಸ್ತಾಂತರಿಸಿದರು.

ಮುಖ್ಯ ಅಧಿಕಾರಿಗಳ ಆಶಯ ನುಡಿ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಎಸ್. ಎಸ್ ಅವರು ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದರು.
ಗೌರವ ಉಪಸ್ಥಿತರಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀ ವಿ. ರಾಮಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಾರಂತ್ ಹಾಗೂ ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಗಿರೀಶ್ ಕೆ. ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಶ್ರೀ ವಿವೇಕ್ ವಿ. ಪಾಯ್ಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು. ರಾಜ್ಯ ಸಂಘಟನಾ ಅಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ ಅವರು ಧನ್ಯವಾದವಿತ್ತರು.






