ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಪತ್ರಕರ್ತ, ಲೇಖಕ, ವೃತ್ತಿಪರ ಛಾಯಾಗ್ರಾಹಕ, ಕೃಷಿಕ ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರಾದ ಅರುಣ್ ಕಿಲ್ಲೂರು ಅವರ ಮೂರನೇ ಕೃತಿ ‘Zero to Crore’ ಇದೇ ಜೂನ್ 28ರಂದು ವೀರಲೋಕ ಪಬ್ಲಿಕೇಷನ್ಸ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿರುವ ‘ಪುಸ್ತಕ ಸಂತೆ’ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.

ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅರುಣ್ ಕಿಲ್ಲೂರು ಅವರು ಸಮಾಜದ ನಾಡಿಮಿಡಿತವನ್ನು ಅರಿತು ತಮ್ಮ ಬರಹಗಳ ಮೂಲಕ ಓದುಗರ ಮನಸ್ಸು ತಲುಪುವಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಬರವಣಿಗೆಯ ಜೊತೆಗೆ ಛಾಯಾಗ್ರಾಹಕರಾಗಿ ಪ್ರಕೃತಿಯ ಸೊಬಗು, ಗ್ರಾಮೀಣ ಬದುಕಿನ ಸರಳತೆ ಹಾಗೂ ಬದುಕಿನ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಅಭಿರುಚಿ ಹೊಂದಿದ್ದಾರೆ. ಕೃಷಿಕರಾಗಿಯೂ ಗುರುತಿಸಿಕೊಂಡಿರುವ ಅವರು ಮಣ್ಣಿನೊಂದಿಗೆ ನಂಟು ಬೆಳೆಸಿಕೊಂಡು ಬದುಕಿನ ವಾಸ್ತವತೆಗಳನ್ನು ಹತ್ತಿರದಿಂದ ಅರಿತಿದ್ದಾರೆ.

ಹೂಡಿಕೆ ಮತ್ತು ಆರ್ಥಿಕ ಜ್ಞಾನದ ಕುರಿತಾಗಿ ರಚಿತವಾಗಿರುವ ‘Zero to Crore’ ಕೃತಿಯು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ದೀರ್ಘಕಾಲೀನ ಹೂಡಿಕೆ, ಸಂಪತ್ತಿನ ಸೃಷ್ಟಿ, ಹಣಕಾಸಿನ ಶಿಸ್ತು ಹಾಗೂ ಆರ್ಥಿಕ ಸ್ವಾತಂತ್ರ್ಯದ ಮಹತ್ವವನ್ನು ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಪರಿಚಯಿಸುತ್ತದೆ. ಹೂಡಿಕೆ ಆರಂಭಿಸಲು ಬಯಸುವವರು, ಹೊಸ ಹೂಡಿಕೆದಾರರು ಹಾಗೂ ಹಣಕಾಸಿನ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಯಸುವ ಎಲ್ಲರಿಗೂ ಈ ಕೃತಿ ಮಾರ್ಗದರ್ಶಕವಾಗಲಿದೆ.
ಅರುಣ್ ಕಿಲ್ಲೂರು ಅವರ ಮೊದಲ ಕೃತಿ ‘ಫೀನಿಕ್ಸ್’ ಫೀನಿಕ್ಸ್ ಮಂದಾರ ಪಬ್ಲಿಕೇಷನ್ಸ್ ಮೂಲಕ ಪ್ರಕಟವಾಗಿದ್ದು, ಎರಡನೇ ಕೃತಿ ‘ಶ್ರೀಮಂತರಗೋಣ ಬನ್ನಿ’ ವೀರಲೋಕ ಪಬ್ಲಿಕೇಷನ್ಸ್ ಮೂಲಕ ಓದುಗರಿಗೆ ತಲುಪಿದೆ. ಇದೀಗ ಅವರ ಮೂರನೇ ಕೃತಿ ‘Zero to Crore’ ಕೂಡ ವೀರಲೋಕ ಪಬ್ಲಿಕೇಷನ್ಸ್ ವತಿಯಿಂದ ಬಿಡುಗಡೆಯಾಗುತ್ತಿರುವುದು ವಿಶೇಷ.

ಷೇರು ಮಾರುಕಟ್ಟೆಯ ಕಾರ್ಯವೈಖರಿ, ಯಶಸ್ವಿ ಹೂಡಿಕೆಯ ತತ್ವಗಳು, ವಿವಿಧ ಹೂಡಿಕೆ ವಿಧಾನಗಳು ಹಾಗೂ ಸಂಪತ್ತಿನ ನಿರ್ಮಾಣದ ಸೂತ್ರಗಳನ್ನು ಸರಳವಾಗಿ ವಿವರಿಸುವ ಈ ಕೃತಿ, ಓದುಗರಲ್ಲಿ ಹೂಡಿಕೆ ಜಾಗೃತಿ ಮೂಡಿಸಿ ಆರ್ಥಿಕ ಬೆಳವಣಿಗೆಯತ್ತ ಹೆಜ್ಜೆ ಇಡಲು ಪ್ರೇರೇಪಿಸುತ್ತದೆ.
ಪುಸ್ತಕವನ್ನು ಮುಂಗಡವಾಗಿ (Pre-Order) ಬುಕ್ ಮಾಡಬಹುದಾಗಿದ್ದು, ಆಸಕ್ತರು ವೀರಲೋಕ ಪಬ್ಲಿಕೇಷನ್ಸ್ ಅನ್ನು ಸಂಪರ್ಕಿಸಬಹುದು.







