ಬೀದರ್: ದೇಶ ಕಾಯೋ ಸೈನಿಕನೊಬ್ಬ ತನ್ನನ್ನು ನಂಬಿ ಬಂದ ಹೆಂಡತಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಪಕ್ಕದ ಮನೆ ಹುಡುಗಿ ಜೊತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ, ಪತ್ನಿಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಬ್ಬಿಣದ ರಾಡ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ.
ಆರೋಪಿ ಭಗವತ್ ಜ್ಞಾನೇಶ್ವರ, ತಾನು ವಾಸವಿದ್ದ ಶಿವನಗರದ ಪಕ್ಕದ ಮನೆಯ ಹುಡುಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಪತ್ನಿ ಸಂಜನಾಗೆ ಗೊತ್ತಾಗಿದ್ದು, ಆಕೆ ಪತಿಯನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದ್ದಾಳೆ.

ಇದರಿಂದ ಇಬ್ಬರ ನಡುವೆ ಜೋರು ಗಲಾಟೆಯಾಗಿದೆ. ಪತ್ನಿಯ ಮೇಲಿನ ಕೋಪದಿಂದ ಸಂಚು ರೂಪಿಸಿದ ಪತಿ ಭಗವತ್, ಆಕೆಯನ್ನು ಕಾರಿನಲ್ಲಿ ಹೊನ್ನಿಕೇರಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ನಿರ್ಜನ ಅರಣ್ಯದಲ್ಲಿ ಕಾರು ನಿಲ್ಲಿಸಿ, ಕಬ್ಬಿಣದ ರಾಡ್ನಿಂದ ಸಂಜನಾ ಅವರ ತಲೆ ಮತ್ತು ಕತ್ತಿನ ಭಾಗಕ್ಕೆ ಮನಬಂದಂತೆ ಜಜ್ಜಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಭೀಕರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.







