ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಭೀಕರ ದುರಂತವೊಂದು ಬೆಳಕಿಗೆ ಬಂದಿದೆ. ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಸಾಯಿ ಸುರಭಿ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಇತ್ತ ಯುವತಿಯ ಪ್ರಿಯಕರ, ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಸಾವಿನ ಬೆನ್ನಲ್ಲೇ ಕಣ್ಣೀರಿಟ್ಟಿರುವ ತಾಯಿ, ಇದೊಂದು ಪಕ್ಕಾ ಪ್ಲಾನ್ಡ್ ‘ಲವ್ ಜಿಹಾದ್’ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಸೋಮವಾರ ಚೆಕ್-ಔಟ್ ಸಮಯ ಮುಗಿದರೂ ರೂಮ್ ಮುಚ್ಚಿತ್ತು. ಇದರಿಂದ ಅನುಮಾನಗೊಂಡ ಹೋಂ ಸ್ಟೇ ಕೇರ್ಟೇಕರ್ ಒಳಗೆ ಹೋಗಿ ನೋಡಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗಳ ಸಾವಿನ ಬೆನ್ನಲ್ಲೇ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ (Love Jihad Murder) ಎಂದು ಗಂಭೀರ ಆರೋಪ ಮಾಡಿದ್ದಾರೆ.
ಏನಿದು ಘಟನೆ?
ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಇಂದು (ಸೋಮವಾರ) ಚೆಕ್-ಔಟ್ ಸಮಯ ಮುಗಿದರೂ ರೂಮ್ ತೆರೆಯದಿದ್ದಾಗ ಹೋಂ ಸ್ಟೇ ಕೇರ್ಟೇಕರ್ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯೋ? ಆತ್ಮಹತ್ಯೆಯೋ?
ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೇಣು ಹಾಕಿದ್ದ ಹಗ್ಗವನ್ನು ಕತ್ತರಿಸಿದ ಸ್ಥಿತಿಯಲ್ಲಿ ಇತ್ತು. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್ನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಸಂಜೀತ್ ಅಲಿಗೆ ಪ್ರಜ್ಞೆ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಇಬ್ಬರೂ ಸೇರಿ ಮಾಡಿಕೊಂಡ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಎಸ್ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ. ಪ್ರಸ್ತುತ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಮಗಳನ್ನು ಕೊಂದುಬಿಟ್ಟ:
ಸಾಯಿ ಸುರಭಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹಿತರ ಮೂಲಕ ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಪರಿಚಯವಾಗಿದ್ದ. ಪರಿಚಯ ಬೆಳೆದಂತೆ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಸಂಜೀತ್ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತು ಆಕೆಗೆ ಬೇರೆ ಕಡೆ ವಿದ್ಯಾಭ್ಯಾಸ ಕೊಡಿಸಿದರೂ, ಆತ ಅಲ್ಲೂ ಹುಡುಕಿಕೊಂಡು ಬಂದು ಕಾಟ ಕೊಡುವುದನ್ನು ಮುಂದುವರಿಸಿದ್ದ. ಅವನು ನನ್ನ ಮಗಳನ್ನು ಸಂಪೂರ್ಣವಾಗಿ ಮರಳು ಮಾಡಿದ್ದ ಅಷ್ಟೇ ಅಲ್ಲದೆ, ಆಕೆಯನ್ನು ಡ್ರಗ್ಸ್ ಅಡಿಕ್ಟ್ ಮಾಡಿದ್ದ. ನಾನು ಕಷ್ಟಪಟ್ಟು ಎರಡು ಮೂರು ಕಡೆ ಚಿಕಿತ್ಸೆ ಕೊಡಿಸಿ ಆಕೆಯನ್ನು ಗುಣಮುಖಳನ್ನಾಗಿ ಮಾಡಿದ್ದೆ. ಇತ್ತೀಚೆಗೆ ಆಕೆ ತುಂಬಾ ಚೆನ್ನಾಗಿ, ಆರೋಗ್ಯವಾಗಿದ್ದಳು ಎಂದು ತಾಯಿ ಗೀತಾ ಕಣ್ಣೀರು ಹಾಕಿದ್ದಾರೆ.

ಇತ್ತೀಚೆಗಷ್ಟೇ ಮುದ್ದೇನಹಳ್ಳಿಯಲ್ಲಿ ಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ ಸಾಯಿ ಸುರಭಿ, ಶನಿವಾರದಂದು ಅಲ್ಲಿ ಸತ್ಸಂಗ ಇದೆ, ನಾನು ಅಲ್ಲೇ ಇರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಳು. ಆದರೆ ಸಂಜೀತ್ ಅಲಿ ಮತ್ತೊಮ್ಮೆ ಆಕೆಯನ್ನು ಹುಡುಕಿಕೊಂಡು ಬಂದು ಮರಳು ಮಾಡಿ ಹೋಂ ಸ್ಟೇಗೆ ಕರೆದೊಯ್ದಿದ್ದಾನೆ. ಅವನೇ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಾಯಿ ಗೀತಾ ಆಕ್ರೋಶ ಹೊರಹಾಕಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ದಾಖಲಾಗಿತ್ತು ನಾಪತ್ತೆ ಕೇಸ್
ಕಳೆದ ವರ್ಷ ಸುರಭಿ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಪುತ್ರಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ಬಳಿಕ ಪೊಲೀಸರು ಸ್ನೇಹಿತರ ಮನೆಯಲ್ಲಿದ್ದ ಸುರಭಿಯನ್ನ ಪತ್ತೆ ಮಾಡಿ ಪೋಷಕರ ಬಳಿ ಒಪ್ಪಿಸಿದ್ದರು.





