ಉಡುಪಿ: ಉಡುಪಿಯ ಬ್ರಹ್ಮಾವರದಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ! ಬಸ್ ನಿಲ್ದಾಣದಲ್ಲಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕನೋರ್ವನನ್ನು ಬಲವಂತವಾಗಿ ಅಪಹರಿಸಿ, ಕೇರಳಕ್ಕೆ ಕರೆದೊಯ್ದು, ಅಲ್ಲಿನ ವುಡ್ ಕಂಪನಿಯೊಂದರಲ್ಲಿ ಜೀತದಾಳುವಾಗಿ ದುಡಿಸಿಕೊಂಡು, ಕ್ರೂರವಾಗಿ ಹಲ್ಲೆ ನಡೆಸಿರುವ ಶಾಕಿಂಗ್ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ!

ಬಂಧಿತರನ್ನು ವಾರಂಬಳ್ಳಿ ಗ್ರಾಮದ ಸಾಲಿಕೇರಿ ನಿವಾಸಿ ವಿಖ್ಯಾತ್ ಆಚಾರ್ಯ (19) ಮತ್ತು ಮಟಪಾಡಿ ನಿವಾಸಿ ಸುಚಿತ್ ನಾಯಕ್ (20) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಕೃತ್ಯಕ್ಕೆ ಸಾಥ್ ನೀಡಿದ್ದ ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು, ಬಾಲ ನ್ಯಾಯಮಂಡಳಿ (JJB) ಮುಂದೆ ಹಾಜರುಪಡಿಸಿದ್ದಾರೆ.
ಘಟನೆಯ ವಿವರ: ಅಷ್ಟಕ್ಕೂ ಜೂನ್ 1 ರಂದು ನಡೆದಿದ್ದೇನು?
ಬ್ರಹ್ಮಾವರ ಬಸ್ ನಿಲ್ದಾಣದಲ್ಲಿದ್ದ ಅಪ್ರಾಪ್ತ ಬಾಲಕನನ್ನು ಈ ಆರೋಪಿಗಳು ಬಲವಂತವಾಗಿ ಕಿಡ್ನ್ಯಾಪ್ ಮಾಡಿದ್ದರು. ಅಲ್ಲಿಂದ ಆತನನ್ನು ನೇರವಾಗಿ ಕೇರಳದ ತಲಪಾಡಿ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪೆನಿಯೊಂದಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದರು.
ದಿನಗಳು ಉರುಳುತ್ತಿದ್ದಂತೆ, ‘ನನಗೆ ಈ ಕೆಲಸ ಬೇಡ, ನನ್ನನ್ನು ಮನೆಗೆ ಕಳುಹಿಸಿ’ ಎಂದು ಬಾಲಕ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ. ಆದರೆ, ಇದಕ್ಕೆ ಕೋಪಗೊಂಡ ಆರೋಪಿಗಳು ಜೂನ್ 9ರಂದು ಬಾಲಕನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದ್ದಾರೆ.”
ಅಲ್ಲಿ ನಡೆದಿದ್ದು ಕ್ರೌರ್ಯದ ಪರಾಕಾಷ್ಠೆ! :
ಆರೋಪಿ ಸುಚಿತ್ ನಾಯಕ್ ಎಲೆಕ್ಟ್ರಿಕ್ ವೈರ್ನಿಂದ ಆ ಬಾಲಕನಿಗೆ ಮೈಯೆಲ್ಲಾ ರಕ್ತ ಬರುವಂತೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇನ್ನೊಬ್ಬ ಆರೋಪಿ ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ, ‘ಮನೆಗೆ ಹೋಗ್ತೀನಿ ಅಂದ್ರೆ ಕೊಲೆ ಮಾಡ್ತೀನಿ’ ಎಂದು ಜೀವ ಬೆದರಿಕೆ ಹಾಕಿದ್ದಾನೆ!
ಇಷ್ಟೇ ಅಲ್ಲ, ಈ ಇಡೀ ಅಮಾನುಷ ಘಟನೆಯನ್ನು ವಶಕ್ಕೆ ಪಡೆಯಲಾದ ಮತ್ತೊಬ್ಬ ಅಪ್ರಾಪ್ತ ಬಾಲಕ ತನ್ನ ಮೊಬೈಲ್ನಲ್ಲಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ!
ಮಗ ನಾಪತ್ತೆಯಾಗಿರುವುದನ್ನು ಕಂಡು ಆತಂಕಗೊಂಡ ಪೋಷಕರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜಾಲ ಬೀಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿಯಲ್ಲಿ ಅಪಹರಣ, ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಮಕ್ಕಳ ರಕ್ಷಣಾ ಕಾಯ್ದೆ (JJ Act) ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಗಂಭೀರ ಮೊಕದ್ದಮೆ ಹೂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.







