ಶಿರ್ಲಾಲು: ಬೆಳ್ತಂಗಡಿಯ ಶಿರ್ಲಾಲಿನಲ್ಲಿ ಸರ್ಕಾರಿ ಕರ್ತವ್ಯನಿರತ ದಲಿತ ಸಮುದಾಯಕ್ಕೆ ಸೇರಿದ ಬಿ.ಎಲ್.ಒ (BLO) ಮಹಿಳೆಗೆ ಜಾತಿ ನಿಂದನೆ ಮಾಡಿ, ಮನೆ ಪ್ರವೇಶಿಸದಂತೆ ತಡೆದು ಅಪಮಾನಿಸಿದ ಗಂಭೀರ ಘಟನೆ ನಡೆದಿದೆ. ಸರ್ಕಾರಿ ಕೆಲಸಕ್ಕೆಂದು ತೆರಳಿದ್ದ ಅಧಿಕಾರಿಗೆ ಜಾತಿನಿಂದನೆ ಮಾಡಿದ ಆರೋಪದ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಜುಲೈ 6 ರಂದು ಈ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಗೂ ಸರ್ಕಾರದ ಬಿ.ಎಲ್.ಒ (BLO) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯದ ಮಹಿಳೆ, ಎ.ಎಲ್.ಒ ಮಾಧವ ಅವರೊಂದಿಗೆ ಸರ್ವೆ ಕೆಲಸಕ್ಕಾಗಿ ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವರ ಮನೆಗೆ ತೆರಳಿದ್ದರು.
ಜುಲೈ 6ರ ಬೆಳಿಗ್ಗೆ ಸುಮಾರು 11:30 ರ ವೇಳೆಗೆ ಅಧಿಕಾರಿಗಳು ಮನೆ ಅಂಗಳ ತಲುಪುತ್ತಿದ್ದಂತೆ, ಆರೋಪಿ ಯಶೋಧ ಆಚಾರಿ ಅವರು ಬಿ.ಎಲ್.ಒ ಮಹಿಳೆಯನ್ನು ತಡೆದಿದ್ದಾರೆ. “ನೀನು ಹೊರಗೆ ನಿಲ್ಲು, ನಿನ್ನ ಜಾತಿಯವರು ಇಲ್ಲಿಗೆ ಬರಬಾರದು, ಅಲ್ಲಿಯೇ ನಿಲ್ಲುವುದು” ಎಂದು ಏಕವಚನದಲ್ಲಿ ಜಾತಿ ನಿಂದನೆ ಮಾಡಿ, ಮನೆಯ ಸಿಟ್-ಔಟ್ ಹಾಗೂ ಮೆಟ್ಟಿಲು ಹತ್ತಲು ಬಿಡದೆ ಹೊರಗಡೆಯೇ ತಡೆದು ತೀವ್ರ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿ.ಎಲ್.ಒ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ ವಿರುದ್ಧ ಜು.7 ರಂದು ಸಂಜೆ SC/ST act-2015(u / s – 3(1)(r), 3(2)(va)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




