ಹೈದರಾಬಾದ್ : ಯುರೋಪಿನ ಸುಂದರ ನಾಡು ಸ್ವಿಟ್ಜರ್ಲೆಂಡ್ಗೆ ರಜೆ ಕಳೆಯಲು ಹೋದ ಉದ್ಯಮಿ ದಂಪತಿ ದಿಢೀರನೆ ನಾಪತ್ತೆಯಾಗಿದ್ದಾರೆ! ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ನಾಪತ್ತೆ ಪ್ರಕರಣದಂತೆ ಕಂಡರೂ, ಇದರ ಹಿಂದೆ ಅಡಗಿದೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ವಂಚನೆಯ ಕರಾಳ ಹಗರಣ! ಏನಿದು ರೋಚಕ ಪ್ರಕರಣ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..!

ನಾಪತ್ತೆಯಾದ ದಂಪತಿಯನ್ನು ಹೈದರಾಬಾದ್ನ ಉದ್ಯಮಿ ಪಬ್ಬಾ ಚಂದ್ರಶೇಖರ್ (51) ಹಾಗೂ ಅವರ ಪತ್ನಿ ಸ್ವಪ್ನಾ (42) ಎಂದು ಗುರುತಿಸಲಾಗಿದೆ. ಜೂನ್ 22 ರಂದು ರಜೆಗಾಗಿ ವಿದೇಶಕ್ಕೆ ತೆರಳಿದ್ದ ಇವರು, ಜುಲೈ 8 ರವರೆಗೆ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅಂದಿನಿಂದ ಇಬ್ಬರ ಮೊಬೈಲ್ ಫೋನ್ಗಳು ದಿಢೀರನೆ ಸ್ವಿಚ್ ಆಫ್ ಆಗಿವೆ. ತಂದೆ-ತಾಯಿ ಫೋನ್ ಸಿಗದೇ ಆತಂಕಗೊಂಡ 23 ವರ್ಷದ ಮಗಳು ಶ್ರೇಯಾ ಹೈದರಾಬಾದ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಲಿಸರು ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ಶುರುಮಾಡುತ್ತಿದ್ದಂತೆಯೇ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ! ಉದ್ಯಮಿ ಚಂದ್ರಶೇಖರ್ ಕಳೆದ ಕೆಲವು ವರ್ಷಗಳಿಂದ ಪರಿಚಯಸ್ಥರು ಹಾಗೂ ಹೂಡಿಕೆದಾರರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರಿಂದ ₹50 ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಅಥವಾ ಬಡ್ಡಿ ನೀಡುವ ಭರವಸೆ ನೀಡಿ ಇಷ್ಟೊಂದು ದೊಡ್ಡ ಮೊತ್ತವನ್ನು ಕೈಗಡವಾಗಿ ಪಡೆದಿದ್ದರು ಎನ್ನಲಾಗಿದೆ.

ಹೂಡಿಕೆದಾರರು ಹಣ ವಾಪಸ್ ಕೇಳಲು ಶುರುಮಾಡಿದ ಬೆನ್ನಲ್ಲೇ ಈ ದಂಪತಿ ಸ್ವಿಟ್ಜರ್ಲೆಂಡ್ಗೆ ಪ್ಲಾನ್ ಮಾಡಿದ್ದರು. ಹೀಗಾಗಿ ಇವರು ಬೇಕೆಂದೇ ಜನರಿಗೆ ವಂಚಿಸಿ, ವಿದೇಶದಲ್ಲಿ ಹಣ ಅಡಗಿಸಿಟ್ಟು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಸಾಮಾನ್ಯವಾಗಿ ಆರ್ಥಿಕ ಅಪರಾಧಿಗಳು ಕಠಿಣ ಬ್ಯಾಂಕಿಂಗ್ ರಹಸ್ಯ ಕಾನೂನುಗಳಿರುವ ಸ್ವಿಟ್ಜರ್ಲೆಂಡ್ ಅಥವಾ ಲಂಡನ್ನಂತಹ ದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಸೈಬರ್ ಕ್ರೈಮ್ ಪೊಲೀಸರು ಇಂಟರ್ಪೋಲ್ ನೆರವು ಪಡೆದು ದಂಪತಿಯ ಕೊನೆಯ ಲೊಕೇಶನ್ ಪತ್ತೆಹಚ್ಚಲು ಮುಂದಾಗಿದ್ದಾರೆ.
ದ್ಯಕ್ಕೆ ಪೊಲೀಸರು ದಂಪತಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ದಂಪತಿ ತಾವಾಗಿಯೇ ನಾಪತ್ತೆಯಾಗಿದ್ದಾರೆಯೇ ಅಥವಾ ನಿಜವಾಗಿಯೂ ಯಾವುದಾದರೂ ಅಪಾಯದಲ್ಲಿ ಸಿಲುಕಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.







