ಬೆಳ್ತಂಗಡಿ: ಬೆಳ್ತಂಗಡಿಯಿಂದ ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. 14 ವರ್ಷದ ಶಾಲಾ ಬಾಲಕನೊಬ್ಬ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಕುರಿಯಾಳದಲ್ಲಿ ನಡೆದಿದೆ.


ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಬಂದಾರು ಗ್ರಾಮದ ಬೈಪಾಡಿ ಕುರಿಯಾಳ ನಿವಾಸಿ ಭರತ್ ಗೌಡ ಎಂಬುವವರ ಪುತ್ರ ಶ್ರವಣ್ ಬಿ.ಕೆ. (14) ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿಯ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ವಿಪರ್ಯಾಸವೆಂದರೆ, ಶ್ರವಣ್ ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದನು. ಆದರೆ, ಸಂಭ್ರಮದ ಮರುದಿನವೇ ಬಾಲಕ ಮನೆಯಲ್ಲಿ ನೇಣಿಗೆ ಶರಣಾಗಿರುವುದು ಇಡೀ ಕುಟುಂಬ ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಮೃತ ಬಾಲಕ ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ.

ಘಟನೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






