ಉಜಿರೆ: ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರಾದ ಶ್ರೀ ಡಿ. ಕಿರಣ್ ಚಂದ್ರ ಪುಷ್ಪಗಿರಿ ಅವರ ಮಾತೃಶ್ರಿ ದಿ. ಶ್ರೀದೇವಿಯವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ಕನ್ಯಾಡಿ ಸೇವಾಭಾರತಿ (ರಿ.) ಮತ್ತು ಪುಷ್ಪಗಿರಿ, ಉರುವಾಲು, ಬೆಳ್ತಂಗಡಿಯ ಶ್ರೀದೇವಿ ಸೇವಾ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ “ನೆರವಿನ ನೆರಳು” ಸಾಂತ್ವನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು 05 ಸೆಪ್ಟೆಂಬರ್ 2026 ರಂದು ಬೆಳಿಗ್ಗೆ 10:30ಕ್ಕೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನೆರವೇರಲಿದೆ.
ಬೆನ್ನುಹುರಿ ಅಪಘಾತಕ್ಕೊಳಗಾಗಿ ಶಾರೀರಿಕ ಸವಾಲುಗಳನ್ನು ಎದುರಿಸುತ್ತಿರುವ ದಿವ್ಯಾಂಗ ಬಂಧುಗಳ ಜೀವನಕ್ಕೆ ಆಸರೆಯಾಗುವ ಉದ್ದೇಶದಿಂದ ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಸಮಾರಂಭದಲ್ಲಿ ಅರ್ಹ ದಿವ್ಯಾಂಗರಿಗೆ ಅಗತ್ಯ ವೈದ್ಯಕೀಯ ಕಿಟ್ಗಳು ಹಾಗೂ ವಿವಿಧ ರಕ್ಷಣೆ ಮತ್ತು ಜೀವನೋಪಾಯಕ್ಕೆ ನೆರವಾಗುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.

ಸಮಾಜಮುಖಿ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಈ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ, ಸಾಮಾಜಿಕ ನಾಯಕರು, ವೈದ್ಯಕೀಯ ಕ್ಷೇತ್ರದ ಗಣ್ಯರು ಹಾಗೂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹಾಗೂ ದಿವ್ಯಾಂಗರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.








