ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ವಿರುದ್ಧ ನಾಗರಿಕ ಸೇವಾ ಟ್ರಸ್ಟ್ನ ರಂಜನ್ ರಾವ್ ಯೆರ್ದೂರ್ ಸಲ್ಲಿಸಿದ್ದ ವಿಶೇಷ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:
SKDRDP ಸಂಸ್ಥೆಯು ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದೆ, ಮನಿ ಲೆಂಡರ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಹಾಗೂ ಸಾರ್ವಜನಿಕರಿಗೆ ವಂಚನೆ (IPC 420) ಎಸಗುತ್ತಿದೆ ಎಂದು ಆರೋಪಿಸಿ ರಂಜನ್ ರಾವ್ ಯೆರ್ದೂರ್ ಬೆಳ್ತಂಗಡಿ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ಹೈಕೋರ್ಟ್ ಆದೇಶ ಹಾಗೂ ಮೇಲ್ಮನವಿ:
ಬೆಳ್ತಂಗಡಿ ನ್ಯಾಯಾಲಯದ ಪ್ರಕ್ರಿಯೆಯನ್ನು ಪ್ರಶ್ನಿಸಿ SKDRDP ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, 2026ರ ಜನವರಿ 9ರಂದು ರಂಜನ್ ರಾವ್ ನೀಡಿದ್ದ ದೂರನ್ನು ವಜಾಗೊಳಿಸಿ (Quash), ಸಂಸ್ಥೆಯ ಪರವಾಗಿ ತೀರ್ಪು ನೀಡಿತ್ತು. ಹೈಕೋರ್ಟ್ನ ಈ ಆದೇಶವನ್ನು ಸವಾಲು ಮಾಡಿ ರಂಜನ್ ರಾವ್ ಯೆರ್ದೂರ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ (SLP(Crl) No. 10752/2026) ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ತೀರ್ಪು:
ಇಂದು (ಸೆಪ್ಟೆಂಬರ್ 8) ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಅರ್ಜಿದಾರರು ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟಪಡಿಸಿ, ರಿಟ್ ಅರ್ಜಿಯನ್ನೇ ಸಂಪೂರ್ಣವಾಗಿ ವಜಾಗೊಳಿಸಿದೆ. ಈ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕಾನೂನಾತ್ಮಕವಾಗಿ ಮತ್ತೊಂದು ಪ್ರಮುಖ ಗೆಲುವು ಸಿಕ್ಕಂತಾಗಿದೆ.





