ವೇಣೂರು: ವೇಣೂರಿನಿಂದ ಕಳೆದ ಸೆಪ್ಟೆಂಬರ್ 10ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೊನೆಗೂ ಪತ್ತೆಯಾಗಿದ್ದಾನೆ.

ವ್ಯಾಪಕ ಹುಡುಕಾಟದ ಬಳಿಕ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇರುವುದು ತಿಳಿದುಬಂದಿದ್ದು, ಸುಖಾಂತ್ಯ ಕಂಡಿರುವ ಈ ಪ್ರಕರಣದಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಶಿಪಟ್ಣ ಗ್ರಾಮದ ನೂಜಡ್ಡ ನಿವಾಸಿ ಶುಭಕರ ಪೂಜಾರಿ ಎಂಬವರ ಪುತ್ರ, ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಿತೇಶ್ ಎಸ್. ಪೂಜಾರಿ ಕಳೆದ ಸೆಪ್ಟೆಂಬರ್ 10ರ ಸಂಜೆ ಮನೆಯಿಂದ ಹೊರಟಿದ್ದ.

ಆದರೆ, ರಾತ್ರಿಯಾದರೂ ಆತ ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತ ಹಾಗೂ ಪರಿಚಿತರ ಬಳಿ ವ್ಯಾಪಕವಾಗಿ ಹುಡುಕಾಟ ನಡೆಸಿದ್ದರು.

ಯಾವುದೇ ಸುಳಿವು ಸಿಗದೆ ಆತಂಕದಲ್ಲಿದ್ದ ಕುಟುಂಬಸ್ಥರಿಗೆ ಇದೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪ್ರಿತೇಶ್ ಬೆಂಗಳೂರಿನಲ್ಲಿ ಇರುವ ಬಗ್ಗೆ ಕುಟುಂಬದ ಮೂಲಗಳಿಂದ ಖಚಿತ ಮಾಹಿತಿ ಲಭಿಸಿದೆ. ವಿಷಯ ತಿಳಿದ ತಕ್ಷಣವೇ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದು, ಆತನನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆದರೆ, ಪ್ರಿತೇಶ್ ಮನೆಯವರಿಗೆ ತಿಳಿಸದೆ ದಿಢೀರನೆ ಬೆಂಗಳೂರಿಗೆ ತೆರಳಲು ನಿಜವಾದ ಕಾರಣವೇನು ಎಂಬುದು ಆತ ಊರಿಗೆ ಮರಳಿದ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.





